Infosys Lay-off | ಇನ್ಫೋಸಿಸ್ ಲೇ-ಆಫ್ ವಿರುದ್ಧ ಕ್ರಮ: ಕರ್ನಾಟಕಕ್ಕೆ ಕೇಂದ್ರದಿಂದ ಮಹತ್ವದ ಸೂಚನೆ
ಇನ್ಫೋಸಿಸ್ ಸುಮಾರು 700 ಕಾರ್ಮಿಕರನ್ನು ವಜಾಗೊಳಿಸಿದೆ ಎಂದು NITES ವರದಿ ಮಾಡಿದೆ. ಈ ಕಾರ್ಮಿಕರು ಕೆಲವು ತಿಂಗಳ ಹಿಂದೆಯಷ್ಟೇ ಕಂಪನಿಗೆ ಸೇರಿದ್ದರು.;
ಟೆಕ್ ದೈತ್ಯ ಇನ್ಫೋಸಿಸ್ ಕಂಪೆನಿ ಇತ್ತೀಚೆಗೆ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಟೆಕ್ ಉದ್ಯೋಗಿಗಳ ಸ್ವತಂತ್ರ ಸಂಘಟನೆ ನೀಡಿದ ದೂರನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು,ಇನ್ಫೋಸಿಸ್‌ನಲ್ಲಿ ಹೊಸಬರನ್ನು ವಜಾಗೊಳಿಸುವ ವಿವಾದವನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕರ್ನಾಟಕ ಕಾರ್ಮಿಕ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (ಎನ್‌ಐಟಿಇಎಸ್-NITES) ಈ ಹಿಂದೆ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಉದ್ಯೋಗಿಗಳನ್ನು ವಜಾಗೊಳಿಸಿರುವ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿತ್ತು. ಇದೀಗ ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ತನಿಖೆ ನಡೆಸಿ ವರದಿ ನೀಡಬೇಕು ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಕಳೆದ ವಾರ, ಇನ್ಫೋಸಿಸ್ ಸುಮಾರು 300 ಹೊಸಬರನ್ನು ವಜಾಗೊಳಿಸುವುದನ್ನು ದೃಢಪಡಿಸಿತ್ತು. ಈ ಉದ್ಯೋಗಿಗಳು ಆಂತರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಲಿಲ್ಲ ಎಂದು ಕಾರಣ ನೀಡಲಾಗಿತ್ತು. ಆದರೂ ಇನ್ಫೋಸಿಸ್ ಸುಮಾರು 700 ಕಾರ್ಮಿಕರನ್ನು ವಜಾಗೊಳಿಸಿದೆ ಎಂದು NITES ವರದಿ ಮಾಡಿದೆ. ಈ ಕಾರ್ಮಿಕರು ಕೆಲವು ತಿಂಗಳ ಹಿಂದೆಯಷ್ಟೇ ಕಂಪನಿಗೆ ಸೇರಿಕೊಂಡಿದ್ದರು.
ವಜಾಗೊಳಿಸಲಾದ ಹೊಸಬರನ್ನು ಗೌಪ್ಯತಾ ಒಪ್ಪಂದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ. ಇದು ವಜಾಗೊಳಿಸುವ ವಿವರಗಳನ್ನು ಮರೆಮಾಚುವ ಪ್ರಯತ್ನವಾಗಿದೆ. ಈ ವಜಾಗೊಳಿಸುವಿಕೆ ಮತ್ತು ಅದರ ಅಡಿಯಲ್ಲಿ ಬರುವ ಉದ್ಯೋಗಿಗಳ ಮೇಲೆ ಅದರ ಪರಿಣಾಮದ ಬಗ್ಗೆ NITES ಆತಂಕ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಸೇರ್ಪಡೆಗೊಂಡ ಹೊಸಬರನ್ನು ಇನ್ಫೋಸಿಸ್ ಬಲವಂತವಾಗಿ ವಜಾಗೊಳಿಸಿದೆ ಎಂದು ಬಾಧಿತ ಕಾರ್ಮಿಕರಿಂದ ಬಂದ ಹಲವಾರು ದೂರುಗಳಿಂದ ನಮಗೆ ತಿಳಿದುಬಂದಿದೆ. ಆಫರ್ ಲೆಟರ್ ಬಂದ ಬಳಿಕ ಈ ಕಾರ್ಮಿಕರ ನೇಮಕಾತಿಗೆ ಎರಡು ವರ್ಷಗಳು ವಿಳಂಬವಾಗಿದೆ ಎಂದು ಕಾರ್ಮಿಕ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ NITES ತಿಳಿಸಿದೆ.
ಆದರೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಇನ್ಫೋಸಿಸ್, ಈ ನೌಕರರು ಆಂತರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾಗಿದ್ದಾರೆ. ಈ ವಿಧಾನವು ನೇಮಕಾತಿ ಸಮಯದಲ್ಲಿ ಕಾರ್ಮಿಕರು ಸಹಿ ಮಾಡಿದ ಒಪ್ಪಂದದ ಪ್ರಕಾರವಾಗಿದೆ ಎಂದು ಹೇಳಿತ್ತು.
ಆದರೆ ಕಂಪನಿಯು ತನ್ನ ಮೈಸೂರು ಕ್ಯಾಂಪಸ್‌ನಿಂದ ನೂರಾರು ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ಮತ್ತು ಪರಿಹಾರ ನೀಡದೆ ವಜಾಗೊಳಿಸಿದೆ. ವಜಾಗೊಳಿಸಿರುವ ನೌಕರರನ್ನು ಕ್ಯಾಂಪಸ್‌ನಿಂದ ಹೊರಹೋಗುವಂತೆ ಹೇಳಿದ್ದು ಮಾತ್ರವಲ್ಲದೆ ಅವರನ್ನು ಬೆದರಿಸಲು ಭದ್ರತಾ ಸಿಬ್ಬಂದಿ ಮತ್ತು ಬೌನ್ಸರ್‌ಗಳನ್ನು ಬಳಲಾಗಿದೆ ಎಂದು NITES ಆರೋಪಿಸಿದೆ.