ಪ್ರಯಾಗ್‌ರಾಜ್‌ ಬಳಿಕ ಮನಾಲಿಗೆ ಬರಲು ಯುವತಿಗೆ ಒತ್ತಡ; ಪಿಎಸ್‌ಐ ವಿರುದ್ಧ ಎಫ್‌ಐಆರ್‌

ಸ್ಥಳೀಯರ ನೆರವಿನಿಂದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌, ಇನ್ಸ್‌ಪೆಕ್ಟರ್‌ ಅವರನ್ನು ಡೆಹ್ರಾಡೂನ್‌ ಠಾಣೆಗೆ ಕರೆದೊಯ್ದು ದೂರು ನೀಡಿದೆ. ಬೆಂಗಳೂರಿನಲ್ಲಿಯೇ ದೂರು ದಾಖಲಿಸುವಂತೆ ಅಲ್ಲಿನ ಠಾಣಾಧಿಕಾರಿ ವಿಮಾನದಲ್ಲಿ ನನ್ನನ್ನು ಕಳುಹಿಸಿಕೊಟ್ಟರು ಎಂದು ಯುವತಿ ದೂರಿದ್ದಾರೆ.;

Update: 2025-03-05 06:22 GMT

ಉತ್ತಮ್‌ ಸಿಂಗ್‌ 

ಯುವತಿಯನ್ನು ಪ್ರಯಾಗರಾಜ್‌ಗೆ ಕರೆದೊಯ್ದು ಯುವತಿ ಮೇಲೆ ಹಲ್ಲೆ ಮಾಡಿ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕಲಬುರಗಿ ಪೊಲೀಸ್‌ ಕಂಟ್ರೋಲ್ ರೂಮ್‌  ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ಪಿಎಸ್‌ಐ ಉತ್ತಮ್‌ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ಪಿಎಸ್‌ಐ ರಜೆ ಮೇಲೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂದಿರಾನಗರದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ದೂರಿನಲ್ಲಿ 'ಕಲಬುರಗಿಯ ಚಂದ್ರಕಾಂತ್ ಕ್ರೀಡಾಂಗಣದಲ್ಲಿ ಈಜು ತರಬೇತಿ ವೇಳೆ ಪಿಎಸ್‌ಐ ಉತ್ತಮ್ ಸಿಂಗ್ ಪರಿಚಯವಾಯಿತು. ಹೊಸ ಕಾರಿನಲ್ಲಿ ಸ್ನೇಹಿತರೊಂದಿಗೆ ಹೈದರಾಬಾದ್‌ನಿಂದ ಅಯೋಧ್ಯೆಗೆ ತೆರಳುತ್ತಿದ್ದು, ಜತೆಯಲ್ಲಿ ಬರುವಂತೆ ಆಹ್ವಾನಿಸಿದರು. ಅದಕ್ಕಾಗಿ ಬೆಂಗಳೂರಿನಿಂದ ಹೈದರಾಬಾದ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಫೆಬ್ರುವರಿ 19 ರಂದು ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳಿ ಅವರನ್ನು ಭೇಟಿ ಮಾಡಿದೆ. ಅವರೊಂದಿಗೆ ಕಲಬುರಗಿ ಇನ್‌ಸ್ಪೆಕ್ಟರ್ ಪ್ರಹ್ಲಾದ್, ಪಿಎಸ್‌ಐ ಅಮರೇಶ, ಸತೀಶ್ ಮತ್ತು ಚಾಲಕ ಇದ್ದರು' ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

"ಅವರ ಜತೆ ಪ್ರಯಾಗರಾಜ್‌ನಿಂದ ಅಯೋಧ್ಯೆಗೆ ತೆರಳಿದ ಬಳಿಕ ಅಲ್ಲಿಂದ ಮನಾಲಿಗೆ ತೆರಳುತ್ತಿರುವುದಾಗಿ ಉತ್ತಮ್ ಸಿಂಗ್ ಹೇಳಿದರು. ಅದಕ್ಕೆ ನಾನು ಒಪ್ಪಿಗೆ ನೀಡಲಿಲ್ಲ. ಆಗ ನನ್ನ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡು ಬೆದರಿಕೆ ಹಾಕಿದರು. ಅಲ್ಲದೇ ಅಸಭ್ಯವಾಗಿ ವರ್ತಿಸಿದರು," ಎಂದು ದೂರಿನಲ್ಲಿ ತಿಳಿಸಿದ್ದಾರೆ.

"ಸ್ಥಳೀಯರ ನೆರವಿನಿಂದ ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದೆ. ಬೆಂಗಳೂರಿನಲ್ಲಿಯೇ ದೂರು ದಾಖಲಿಸುವಂತೆ ಅಲ್ಲಿನ ಠಾಣಾಧಿಕಾರಿ  ಡೆಹರಾಡೂನ್‌ನಿಂದ ವಿಮಾನದಲ್ಲಿ ನನ್ನನ್ನು ಕಳುಹಿಸಿಕೊಟ್ಟರು. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ದೂರಿನಲ್ಲಿ ವಿವರಿಸಿದ್ದಾರೆ.

Tags:    

Similar News