Gold Smuggling | ರನ್ಯಾ ರಾವ್​ ಚಿನ್ನ ಕಳ್ಳಸಾಗಣಿಕೆ ಪ್ರಕರಣ: ಸಿಐಡಿ ತನಿಖೆ ಆದೇಶ ಹಿಂಪಡೆಯಲು ಕಾರಣವೇನು?

ಡಿಪಿಎಅರ್‌ ತನಿಖೆ ಮಾಡಿದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಹಾಗೂ ಸಿಐಡಿ ತನಿಖೆಯಲ್ಲಿ ರನ್ಯಾರಾವ್‌ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ಅವರನ್ನೂ ತನಿಖೆಗೆ ಒಳಪಡಿಸುವುದು ಸರ್ಕಾರದ ಮುಜುಗರಕ್ಕೆ ಕಾರಣವಾಗಹುದು ಎನ್ನಲಾಗಿದೆ.;

Update: 2025-03-13 06:10 GMT

ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್​  ಅಕ್ರಮ ಚಿನ್ನ ಸಾಗಾಟ ಪ್ರಕರಣ ಸಂಬಂಧ ಎರಡು ಪ್ರತ್ಯೇಕ ತನಿಖೆಗಳನ್ನು ನಡೆಸಲು ಆದೇಶಸಿದ್ದ ಸರ್ಕಾರ, ಈಗ  ಸಿಐಡಿ ತನಿಖೆ ಆದೇಶವನ್ನು  ತಕ್ಷಣದಿಂದ ವಾಪಸ್‌ ಪಡೆದುಕೊಂಡಿದೆ.

ರನ್ಯಾ ವಿದೇಶ ಪ್ರಯಾಣ ವೇಳೆ ವಿಮಾನ ನಿಲ್ದಾಣದರೆಗೆ ಪೊಲೀಸ್‌ ಭದ್ರತೆ ಒದಗಿಸಿರುವುದು, ಆಕೆ ತನ್ನ ಮಲತಂದೆ ಡಿಜಿಪಿ ರಾಮಚಂದ್ರರಾವ್‌ ಅವರ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡಿರುವುದು ಹಾಗೂ  ಶಿಷ್ಟಾಚಾರ ಉಲ್ಲಂಘನೆಯಾದ ಹಿನ್ನೆಲೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಆದೇಶ ಹೊರಡಿಸಿತ್ತು.

ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ (ಡಿಪಿಎಆರ್‌) ಇಲಾಖೆಗೆ ಮೊದಲು ತನಿಖೆಗೆ ಆದೇಶಿಸಲಾಗಿತ್ತು. ಬಳಿಕ ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಸಿಐಡಿ ತನಿಖೆಗೂ ಆದೇಶಿಸಲಾಗಿತ್ತು. ಒಂದೇ ವಿಷಯದ ಬಗ್ಗೆ ಎರಡೆರಡು ತನಿಖೆಗಳನ್ನು ಆದೇಶಿಸಿರುವುದು ಅಧಿಕಾರಿ ವರ್ಗದಲ್ಲಿ ಗೊಂದಲ ಸೃಷ್ಟಿಸಿತ್ತು ಎನ್ನಲಾಗಿದೆ.

ಜತೆಗೆ, ರನ್ಯಾರಾವ್‌ ಪ್ರಕರಣದ ಸಂಬಂಧ ಸಿಬಿಐ ಹಾಗೂ ಡಿಆರ್‌ಐ ಈಗಾಗಲೇ ತನಿಖೆ ಆರಂಭಿಸಿದೆ. ಡಿಪಿಎಅರ್‌ ತನಿಖೆ ಮಾಡಿದರೆ ಕ್ರಿಮಿಲನ್‌ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಹಾಗೂ ಸಿಐಡಿ ತನಿಖೆಯಲ್ಲಿ ರನ್ಯಾರಾವ್‌ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ಅವರನ್ನೂ ತನಿಖೆಗೆ ಒಳಪಡಿಸುವ ಅಗತ್ಯ ಉದ್ಭವಿಸುತ್ತದೆ. ಇದು ಮತ್ತೆ ಸರ್ಕಾರಕ್ಕೆ ಮುಜುಗರ ಸೃಷ್ಟಿಸಬಹುದು ಹಾಗೂ ಸಿಬಿಐ ಮತ್ತು ಡಿಅರ್‌ಐ ತನಿಖೆಗೆ ಪೂರಕ ತನಿಖೆ ನಡೆಸಿದಂತಾಗುತ್ತದೆ. ರಾಜಕೀಯವಾಗಿಯೂ ಸಿಬಿಐ ತನಿಖೆಯನ್ನು ʼಕೇಂದ್ರದ ಪಿತೂರಿʼ ಎಂಬಂತೆ ಬಿಂಬಿಸಲು ಸಾಧ್ಯವಾಗುತ್ತದೆ ಎಂಬ ಚರ್ಚೆ ನಡೆದಿದೆ ಎನ್ನಲಾಗಿದೆ.



ಶಿಷ್ಟಾಚಾರ ಉಲ್ಲಂಘನೆಯಲ್ಲಿ ಕಾನ್ ಸ್ಟೇಬಲ್ ಗಳು ಭಾಗಿಯಾಗಿದ್ದಾರೆ ಎನ್ನಲಾಗಿದ್ದ, ಅವರನ್ನು ತನಿಖೆಗೆ ಒಳಪಡಿಸಿದರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ʼಗಣ್ಯ ವ್ಯಕ್ತಿʼಗಳ ಹೆಸರುಗಳು ಹೊರಬರಬಹುದು ಎಂಬ ಆತಂಕವೂ ಕೆಲವರಿಗಿತಗ್ತು ಎನ್ನಲಾಗಿದೆ. ಒಟ್ಟಾರೆಯಾಗಿ ಎಲ್ಲಾ ಆಗುಹೋಗುಗಳನ್ನು ಗಮನಿಸಿ ಸಿಐಡಿ ತನಿಖೆಯನ್ನು ವಾಪಸ್‌ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಹಾಗಾಗಿ ಬುಧವಾರ(ಮಾರ್ಚ್ 12) ಏಕಾಏಕಿ ಸರ್ಕಾರ, ಸಿಐಡಿ ಆದೇಶವನ್ನು ವಾಪಸ್ ಪಡೆದುಕೊಂಡಿದೆ. 

ಡಿಪಿಎಆರ್‌ ತನಿಖೆ

ರನ್ಯಾ ರಾವ್ ಅವರ ಮಲತಂದೆ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ. ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದಲ್ಲಿ ತನಿಖೆ ಮುಂದುವರಿಯುತ್ತದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಆದೇಶವನ್ನು ವಾಪಸ್ ಪಡೆದಿರುವುದಾಗಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಕೆ ರಾಮಚಂದ್ರ ರಾವ್ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಾಮೀನು ಅರ್ಜಿ ಕಾಯ್ದಿರಿಸಿದ ನ್ಯಾಯಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಸಲ್ಲಿಸಿದ ಜಾಮೀನು ಅರ್ಜಿಯ ತೀರ್ಪು ಮಾರ್ಚ್ 14 ಕ್ಕೆ ನ್ಯಾಯಾಲಯ  ಕಾಯ್ದಿರಿಸಿದೆ.ಆರೋಪಿ ಮಹಿಳೆ ಎಂಬುದು ನಮಗೆ ತಿಳಿದಿದೆ. ನಮಗೂ ಮಾನವೀಯತೆ ಇದೆ. ಆದರೆ ಇಷ್ಟೆಲ್ಲಾ ಆಗಿರುವಾಗ ಸಂಪೂರ್ಣ ತನಿಖೆ ನಡೆಯಬೇಕಲ್ಲವೇ? ಈ ಹಂತದಲ್ಲಿ ಜಾಮೀನು ನೀಡಬಾರದು. ಯಾಕೆಂದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈಗ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡಬಾರದು ಎಂದು ಪಿಪಿ ಮಧುರಾವ್ ವಾದ ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್‌ ತೀರ್ಪು ಕಾಯ್ದಿರಿಸಿದೆ. 

ಏನಿದು ಪ್ರಕರಣ?

ಮಾರ್ಚ್ 3, 2025 ರಂದು ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದ ತಕ್ಷಣ ಆಕೆಯನ್ನು ತಡೆದ ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ರನ್ಯಾ ಬಳಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು. ಈ ಚಿನ್ನದ ಬಿಸ್ಕೆತ್‌ಗಳನ್ನು 1962 ರ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅವರ ನಿವಾಸದಲ್ಲಿ ನಡೆಸಿದ ಮುಂದಿನ ಶೋಧದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ.ಗಳಿಗೆ ತಲುಪಿತ್ತು. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಎಫ್‌ಐಆ‌ರ್ ದಾಖಲಿಸಿ ತನಿಖೆ ನಡೆಸುತ್ತಿದೆ.

Tags:    

Similar News