Stray Dogs Menace | ಬೀದಿನಾಯಿ ಹಾವಳಿ ತಡೆಗೆ ವಿಧಾನಸೌಧದಲ್ಲೇ ಆಶ್ರಯತಾಣ!

stray dogs in Vidhan soudha: ನಾಯಿಗಳ ಆಶ್ರಯತಾಣವನ್ನು ನಿರ್ವಹಿಸಲು ಪ್ರಾಣಿ ದಯಾ ಸಂಘ ಅಥವಾ ಇನ್ನಾವುದೇ ಎನ್‌ಜಿಒಗೆ ಜವಾಬ್ದಾರಿ ವಹಿಸಲಾಗುವುದು. ಈ ಬಗ್ಗೆ ಮುಂದಿನ ಹದಿನೈದು ದಿನಗಳಲ್ಲೇ ಟೆಂಡರ್‌ ಕರೆಯಲಿದ್ದೇವೆ ಎಂದು ಸ್ಪೀಕರ್‌ ಖಾದರ್ ತಿಳಿಸಿದ್ದಾರೆ.;

Update: 2025-02-05 08:40 GMT
ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ವಿಧಾನಸೌದದ ಬಳಿ ನಾಯಿಗಳಿಗೆ ಶೆಲ್ಟರ್‌

ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಪಂಚಾಯ್ತಿ ಮಟ್ಟದಿಂದ ವಿಧಾನಸೌಧದವರೆಗೆ ವ್ಯಾಪಕ ಚರ್ಚೆಯಾಗುತ್ತಿದೆ. ಆದರೂ ನಾಗರಿಕರು ಬೀದಿ ನಾಯಿ ದಾಳಿಗೆ ಒಳಗಾಗುವ, ಅಪಘಾತಕ್ಕೀಡಾಗುವ ಘಟನೆಗಳು ವರದಿಯಾಗುತ್ತಲೇ ಇವೆ. 

ಒಂದು ಕಡೆ ಪ್ರಾಣಿ ದಯಾ ಸಂಘದವರ ಪ್ರಾಣಿ ಪ್ರೀತಿ, ಮತ್ತೊಂದು ಕಡೆ ನ್ಯಾಯಾಲಯಗಳ ಆದೇಶಗಳಾದರೆ, ಮತ್ತೊಂದು ಕಡೆ ಈ ಹಾವಳಿಯಿಂದ ಸಾವು-ನೋವಿಗೀಡಾದವರ ಆಕ್ರೋಶ. ಹೀಗೆ ಸ್ಥಳೀಯ ಸಂಸ್ಥೆಗಳು ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ. ಕೇವಲ ಪೌರ ಸಂಸ್ಥೆಗಳು ಮಾತ್ರವಲ್ಲ; ಸ್ವತಃ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಕೂಡ ಇಂತಹದ್ದೇ ಅಡಕತ್ತರಿಯಲ್ಲಿ ಸಿಲುಕಿದೆ.

ವಿಧಾನಸೌಧದ ಮೂರನೇ ಮಹಡಿಯವರೆಗೂ ಬೀದಿ ನಾಯಿಗಳು ವ್ಯಾಪಿಸಿವೆ. ನಿತ್ಯ ಸಾವಿರಾರು ಜನ ಭೇಟಿ ನೀಡುವ, ಶಾಲಾ ಮಕ್ಕಳು ಮತ್ತು ಮಹಿಳೆಯರು ಬರುವ ವಿಧಾನಸೌಧದಲ್ಲೇ ಬೀದಿ ನಾಯಿಗಳು ರಾಜಾರೋಷವಾಗಿ ಓಡಾಡಿಕೊಂಡಿರುವುದು ಅಪಾಯಕಾರಿ. ಜನ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ವೀಕ್ಷಣೆಗೆ ಬರುವ ಶಾಲಾ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದರೆ ಏನು ಗತಿ? ಎಂಬ ಆತಂಕ ವ್ಯಕ್ತವಾಗಿದೆ.

ಆ ಹಿನ್ನೆಲೆಯಲ್ಲಿ ನ್ಯಾಯಾಲಯ ಕೂಡ ವಿಧಾನಸೌಧದ ಆವರಣ ಮತ್ತು ಆಸುಪಾಸಿನಲ್ಲಿ ಬೀದಿ ನಾಯಿಗಳಿಗೆ ಯಾರೂ ಆಹಾರ ನೀಡಬಾರದು ಎಂದು ಸೂಚಿಸಿತ್ತು. 

ಸ್ಪೀಕರ್‌ ನೇತೃತ್ವದಲ್ಲಿ ಸಭೆ

ಈ ನಡುವೆ, ವಿಧಾನಸೌಧದ ಬೀದಿ ನಾಯಿ ಹಾವಳಿ ಕುರಿತ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಸ್ಪೀಕರ್‌ ಯು ಟಿ ಖಾದರ್‌ ಮತ್ತು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಸೇರಿದಂತೆ ಉನ್ನತಾಧಿಕಾರಿಗಳು ಮತ್ತು ಸಚಿವರ ಸಭೆ ನಡೆದಿದೆ.

ವಿಧಾನಸೌಧದ ಆವರಣದ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವೇನು ಎಂಬ ಬಗ್ಗೆ ಕಾನೂನು ಮತ್ತು ನಾಗರಿಕ ಸುರಕ್ಷತೆಯ ದೃಷ್ಟಿಕೋನದಿಂದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ.

ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಪ್ರಸ್ತಾಪವನ್ನು ಕುರಿತು ಸ್ಪೀಕರ್‌ ಖಾದರ್‌ ಅವರೇ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಹಾಗಾಗಿ ವಿಧಾನಸೌಧದ ಆವರಣದಲ್ಲಿಯೇ ನಾಗರಿಕರಿಗೆ ತೊಂದರೆಯಾಗದಂತೆ ನಾಯಿಗಳಿಗೆ ಪುನರ್ವಸತಿ ಕಲ್ಪಿಸುವ ಸಾಧ್ಯತೆಗಳೇನು? ಯಾವೆಲ್ಲಾ ಇಲಾಖೆ, ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯವನ್ನು ಕಾರ್ಯಗತಗೊಳಿಸಬಹುದು? ಸ್ಥಳ, ಅನುದಾನ, ಕಾನೂನು ಅವಕಾಶಗಳೇನು? ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಅಂತಿಮವಾಗಿ ವಿಧಾನಸೌಧದ ಆವರಣದಲ್ಲಿಯೇ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯುಟಿ ಖಾದರ್‌, ಪ್ರಾಣಿಗಳಿಗೆ ಮನುಷ್ಯರಂತೆಯೇ ಬದುಕುವ ಹಕ್ಕಿದೆ. ಪ್ರಾಣಿಗಳಿಗೆ ಮಾತನಾಡಲು ಆಗುತ್ತಾ, ಅವುಗಳ ಕಷ್ಟ ನೋಡಬೇಕು. ವಿಧಾನಸೌಧ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುವಾಗ ನಾಯಿ ಹಾವಳಿ ಹೆಚ್ಚಾಗಿದೆ. ಇದರಿಂದ ವಿಧಾನಸೌಧ ನೋಡಲು ಮಕ್ಕಳು ಬಂದಾಗ ಭಯಭೀತರಾಗುತ್ತಾರೆ. ವಿಧಾನಸೌಧದ ಆವರಣದಿಂದ ಸ್ಥಳಾಂತರದ ಬಗ್ಗೆ ಚರ್ಚಿಸಿದ್ದೇವೆ. ಆದರೆ, ಅದು ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿಯೇ ಆಶ್ರಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ತಜ್ಞರು ಮೊದಲು ವಿಧಾನಸೌಧದ ಆವರಣದಲ್ಲಿನ ಬೀದಿ ನಾಯಿ ಸಮಸ್ಯೆಯ ಕುರಿತು ವರದಿ ಸಲ್ಲಿಸುತ್ತಾರೆ. ವರದಿಯಲ್ಲಿ ಸಚಿವಾಲಯದ ಸುತ್ತಲೂ ವಾಸಿಸುವ ಬೀದಿ ನಾಯಿಗಳ ಸಂಖ್ಯೆ, ಅವುಗಳ ವಯಸ್ಸು, ಅವುಗಳಿಗೆ ಲಸಿಕೆ ನೀಡಲಾಗಿದೆಯೇ ಮತ್ತು ಪ್ರಾಣಿಗಳು ಸುರಕ್ಷಿತವಾಗಿವೆಯೇ ಎಂಬಂತಹ ವಿವರ ಇರಲಿವೆ. ಆ ಬಳಿಕ ಬೀದಿ ನಾಯಿಗಳಿಗೆ ಪ್ರತ್ಯೇಕ ಶೆಲ್ಟರ್‌ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. 

ನಾಯಿಗಳ ಆಶ್ರಯತಾಣವನ್ನು ನಿರ್ವಹಿಸಲು ಪ್ರಾಣಿ ದಯಾ ಸಂಘ ಅಥವಾ ಇನ್ನಾವುದೇ ಎನ್‌ಜಿಒಗೆ ಜವಾಬ್ದಾರಿ ವಹಿಸಲಾಗುವುದು. ಈ ಬಗ್ಗೆ ಮುಂದಿನ ಹದಿನೈದು ದಿನಗಳಲ್ಲೇ ಟೆಂಡರ್‌ ಕರೆಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Tags:    

Similar News