ಸಚಿವ ಜಮೀರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಪುನೀತ್ ಕೆರೆಹಳ್ಳಿ ಅರೆಸ್ಟ್
ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ಧರ್ಮವನ್ನು ನಿಂದಿಸಿ ವಿಡಿಯೋ ಮಾಡಿದ್ದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.;
ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ನಿಂದಿಸಿದಿ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಅವರು ಕೇಂದ್ರ ಸಂಸದ ಎಚ್.ಡಿ ಕುಮಾರಸ್ವಾಮಿ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪುನೀತ್ ಕೆರೆಹಳ್ಳಿ ವಿಡಿಯೋವೊಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಸಚಿವ ಜಮೀರ್ ಬಗ್ಗೆ "ಏ ಜಮೀರ್.." ಎಂದು ಏಕವಚನದಲ್ಲಿ ಮಾತನಾಡಿ ಅವಹೇಳನಕಾರಿ ಮಾತು ಹಾಗೂ ಧರ್ಮ ಮತ್ತು ಜಾತಿ ನಿಂದನೆ ಮಾಡಿರುವ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸಚಿವರ ಆಪ್ತ ಸಹಾಯಕ ಬಿ.ಎಸ್. ಅಶೋಕ್ ನೀಡಿದ ದೂರು ಆಧರಿಸಿ ಬುಧವಾರ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
"ನವೆಂಬರ್ 11 ರಂದು ಪುನೀತ್ ಕೆರೆಹಳ್ಳಿ ತಮ್ಮ ಸೋಷಿಯಲ್ ಮೀಡಿಯಾ ಫೇಸ್‌ಬುಕ್ ಲಿಂಕ್‌ನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಕುರಿತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿದ್ದಾರೆ. ಧರ್ಮಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಕಾರಿ ಹೇಳಿಕೆ ನೀಡಿರುತ್ತಾರೆ. ಪದೇಪದೆ ಅವಾಚ್ಯ ಶಬ್ದಗಳಿಂದ ಸಚಿವರನ್ನು ನಿಂದಿಸಿರುತ್ತಾರೆ. ಜತೆಗೆ ಪ್ರಾಣ ಬೆದರಿಕೆ ಸಹ ಹಾಕಿರುತ್ತಾರೆ. ಹೀಗಾಗಿ, ಕೂಡಲೇ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ಕೋರಲಾಗಿತ್ತು.
14 ದಿನಗಳ ನ್ಯಾಯಾಂಗ ಬಂಧನ
ಆ ದೂರಿನ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಪೋಸ್ಟ್‌ನಲ್ಲಿ ಏನಿತ್ತು?
ನವೆಂಬರ್ 11 ರಂದು ಪುನೀತ್ ಕೆರೆಹಳ್ಳಿ ತನ್ನ ಸೋಷಿಯಲ್ ಮೀಡಿಯಾ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಆ ವಿಡಿಯೋದಲ್ಲಿ "ಲೇ ಜಮೀರ್ ಅಹಮದ್ ಖಾನ್, ಕುಮಾರಸ್ವಾಮಿ ಅವರನ್ನು ಕರಿಯಾ ಅಂದ ನೀನು ನನ್ನ ಈ ಮಾತುಗಳನ್ನು ಸರಿಯಾಗಿ ಕೇಳಿಸಿಕೊ. ನಮ್ಮದೇ ನಾಡಿನಲ್ಲಿ, ನಮ್ಮದೇ ಜನರ ಮುಂದೆ ಅದೂ ನಮ್ಮ ನಾಯಕರ ಬಗ್ಗೆ ಅವರ ಬಣ್ಣವನ್ನು ಹಂಗಿಸಿ ಮಾತನಾಡಿದ್ದೀಯಾ. ನಿನಗೆಷ್ಟು ದುರಹಂಕಾರ ಹಾಗೂ ದರ್ಪ ಬಂತಾ.." ಎಂದು ನಿಂದಿಸಿದ್ದ. "ನಾವು ಹಿಂದೂಗಳು ಕಪ್ಪಗಿದ್ದೇವೆ. ನಾವು ಪೂಜಿಸುವ ಕೃಷ್ಣ ಕಪ್ಪಗಿದ್ದಾರೆ.." ಎಂದು ಹೇಳಿದ್ದ ಪುನೀತ್ ಕೆರೆಹಳ್ಳಿ, ಜಮೀರ್ ಮತ್ತು ಅವರ ಧರ್ಮದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿದ್ದ.
ಜಮೀರ್ ಹೇಳಿಕೆ ಏನು?
ಭಾನುವಾರ ರಾತ್ರಿ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಜಮೀರ್ ಮಾತನಾಡುತ್ತಾ, ತಮ್ಮ ಹಳೆಯ ಗೆಳೆಯ ಹಾಗೂ ಈಗ ರಾಜಕೀಯ ವಿರೋಧಿಯಾಗಿರುವ ಕುಮಾರಸ್ವಾಮಿ ಅವರ ವಿರುದ್ಧ, “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕಪ್ಪು ಬಣ್ಣ ಹೊಂದಿರುವ ಕುಮಾರಸ್ವಾಮಿ) ಹೆಚ್ಚು ಡೇಂಜರ್" ಎಂದು ಉರ್ದುವಿನಲ್ಲಿ ಹೇಳಿಕೆ ನೀಡಿದ್ದರು.
"ಯೋಗೇಶ್ವರ್ ಕಾಂಗ್ರೆಸ್‌ನಿಂದಲೇ ರಾಜಕೀಯ ಪ್ರಾರಂಭ ಮಾಡಿದ್ರು, ಆದರೆ ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್ ಹೋಗಬೇಕು ಅಂದುಕೊಂಡಿದ್ದರೂ, ಅವರು ʼಕಾಲಾ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ʼ ಅಂತ ಆ ಪಕ್ಷದ ಅಭ್ಯರ್ಥಿಯಾಗಲು ಒಪ್ಪಲಿಲ್ಲ" ಎಂದು ಹೇಳಿಕೆ ನೀಡಿದ್ದರು.
ಪ್ರಮುಖವಾಗಿ ಮುಸ್ಲಿಂ ಮತದಾರರನ್ನು ಸೆಳೆಯಲು ವಸತಿ ಮತ್ತು ವಕ್ಸ್ ಸಚಿವರೂ ಆಗಿರುವ ಜಮೀರ್, ಹಿಂದೆ ಹಿಜಾಬ್ ವಿವಾದ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. "ಈ ಹಿಂದೆ ಹಿಜಾಬ್ ಬೇಡ ಬೇಡ ಅಂದಿದ್ದೆ, ಈಗ ನಿನಗೆ ಮುಸಲ್ಮಾನರ ಓಟ್ ಬೇಕಾ? ಏ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ. ಈ ಕುಮಾರಸ್ವಾಮಿ ಬಿಜೆಪಿ ಹೋಗಿ ಮುಸಲ್ಮಾನರನ್ನು ಖರೀದಿ ಮಾಡುತ್ತಾನಂತೆ.." ಎಂಬ ಹೇಳಿಕೆ ನೀಡಿದ್ದರು.