ಹಾಸನ-ಮೈಸೂರಿಗೆ ತೆರಳಲು ಅನುಮತಿ ಕೋರಿದ ಭವಾನಿ ರೇವಣ್ಣ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಜೆಡಿಎಸ್‌ ಮುಖಂಡ ಎಚ್‌ ಡಿ ರೇವಣ್ಣ ಪತ್ನಿ ಹಾಗೂ ಪ್ರಜ್ವಲ್‌ ರೇವಣ್ಣರ ತಾಯಿಯಾಗಿರುವ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠವು ಆದೇಶ ಕಾಯ್ದಿರಿಸಿತು.;

Update: 2025-03-10 10:43 GMT

ಭವಾನಿ ರೇವಣ್ಣ

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಅಪಹರಿಸಿದ ಆರೋಪಿಯಾಗಿರುವ ಭವಾನಿ ರೇವಣ್ಣ ಅವರು, ಮೈಸೂರು ಮತ್ತು ಹಾಸನಕ್ಕೆ ತೆರಳಲು ನಿರ್ಬಂಧ ತೆರವಿಗೆ ಕೋರಿರುವ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಕಾಯ್ದಿರಿಸಿದೆ.

ಜೆಡಿಎಸ್‌ ಮುಖಂಡ ಎಚ್‌ ಡಿ ರೇವಣ್ಣ ಪತ್ನಿ ಹಾಗೂ ಪ್ರಜ್ವಲ್‌ ರೇವಣ್ಣರ ತಾಯಿಯಾಗಿರುವ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠವು ಆದೇಶ ಕಾಯ್ದಿರಿಸಿತು.

ಭವಾನಿ ಪರ ವಕೀಲರು “ಭವಾನಿ ಅವರು 9 ತಿಂಗಳ ಹಿಂದೆ ಪಡೆದಿರುವ ನಿರೀಕ್ಷಣಾ ಜಾಮೀನು ಷರತ್ತು ಉಲ್ಲಂಘಿಸಿಲ್ಲ. ಉಳಿದ ಆರು ಆರೋಪಿಗಳಿಗೆ ಎಲ್ಲಕಡೆ ಓಡಾಡಲು ಅನುಮತಿ ನೀಡಲಾಗಿದೆ.  ಮೊದಲನೇ ಆರೋಪಿ ಎಚ್‌ ಡಿ ರೇವಣ್ಣಗೆ ಮಾತ್ರ ಕೆ ಆರ್‌ ನಗರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ, ಕಳೆದ ವರ್ಷ ಹಾಸನದ ದೇವಸ್ಥಾನಕ್ಕೆ ತೆರಳಲು ನೀಡಿದ್ದ 10 ದಿನಗಳ ಅನುಮತಿಯಲ್ಲಿಯೂ ಯಾವುದೇ ಉಲ್ಲಂಘನೆಯಾಗಿಲ್ಲ” ಎಂದು ನ್ಯಾಯಾಲದ ಮುಂದೆ ಮುಂದೆ ವಾದಿಸಿದರು. 

 “ಪ್ರಜ್ವಲ್‌ ವಿರುದ್ಧದ ಪ್ರಕರಣಕ್ಕೂ ಭವಾನಿಗೂ ಯಾವುದೇ ಸಂಬಂಧವಿಲ್ಲ. ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸುಪ್ರೀಂ ಕೋರ್ಟ್‌ ಅದನ್ನು ಎತ್ತಿ ಹಿಡಿದಿದೆ. ವಿಶೇಷ ತನಿಖಾ ದಳದ ತನಿಖೆಗೆ ಭವಾನಿ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ. ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದರು” ಎಂದು ಹೇಳಿದ್ದಾರೆ. 

ಸರ್ಕಾರದ ಪರ ವಕೀಲರು “ ಅಪಹರಣ ಪ್ರಕರಣದಲ್ಲಿ ಭವಾನಿ ಮಾಸ್ಟರ್‌ ಮೈಂಡ್‌ . ಪ್ರಜ್ವಲ್‌ ದೇಶ ತೊರೆಯುವಲ್ಲಿಯೂ ಭವಾನಿ ಪಾತ್ರ ಇದೆ.  ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಅವರು ನಾಪತ್ತೆಯಾಗಿದ್ದರು. ಆಕೆ ತಮ್ಮ ಮೊಬೈಲ್‌ ಅನ್ನು ಇಂದಿಗೂ ತನಿಖಾಧಿಕಾರಿಗೆ ಒಪ್ಪಿಸಿಲ್ಲ. ಒಂಭತ್ತನೇ ಆರೋಪಿಯಾಗಿರುವ ಭವಾನಿ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿಯಾಗಿದೆ.  ಎಸ್‌ಐಟಿ ಅಧಿಕಾರಿಗಳು ವಿಸ್ತೃತವಾದ ತನಿಖೆ ನಡೆಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ನಾಲ್ಕು ಸಂಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ನಿಗದಿಗೂ ಮುನ್ನಾ ವಾದ-ಪ್ರತಿವಾದ ನಡೆಯುತ್ತಿದೆ. ಕನಿಷ್ಠ ಪಕ್ಷ ಸಂತ್ರಸ್ತೆಯರ ವಿಚಾರಣೆ ಪೂರ್ಣಗೊಳ್ಳುವವರೆಗೆ ಭವಾನಿಗೆ ಹಾಸನ ಮತ್ತು ಮೈಸೂರು ಜಿಲ್ಲಾ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಮುಂದುವರಿಸಬೇಕು” ಎಂದರು.

“ಸಂತ್ರಸ್ತೆಯು ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆಯಲ್ಲಿ ಭವಾನಿಯಿಂದ ಏನೆಲ್ಲಾ ಸಮಸ್ಯೆಯಾಗಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ನೂರಾರು ಮಹಿಳೆಯರು ಪ್ರಜ್ವಲ್‌ರಿಂದ ಅತ್ಯಾಚಾರಕ್ಕೆ ಒಳಗಾಗಿದ್ದು, ನಾಲ್ಕೇ ನಾಲ್ಕು ಮಂದಿ ಮಾತ್ರ ದೂರು ನೀಡಿದ್ದಾರೆ. ಈ ಹಂತದಲ್ಲಿ ಭವಾನಿಗೆ ಮೈಸೂರು ಮತ್ತು ಹಾಸನಕ್ಕೆ ತೆರಳು ಅನುಮತಿಸುವುದು ಸೂಕ್ತವಾದ ಕ್ರಮವಾಗುವುದಿಲ್ಲ” ಎಂದರು.

ಜೂನ್‌ 7ರಂದು ಹೈಕೋರ್ಟ್‌ ಭವಾನಿಗೆ ಏಳು ಷರತ್ತುಗಳನ್ನು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.  ಎಸ್‌ಐಟಿಯು ಭವಾನಿ ಅವರನ್ನು ಬಂಧಿಸಬಾರದು ಅಥವಾ ವಶಕ್ಕೆ ಪಡೆಯಬಾರದು. ಜಾಮೀನು ಸಿಕ್ಕಿದ್ದಕ್ಕೆ ಸಂಭ್ರಮಿಸುವಂತಿಲ್ಲ ಎಂದು ಹೇಳಿದ್ದ ಕೋರ್ಟ್​​,ಭವಾನಿ ಅವರಿಗೆ ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸಬಾರದು ಎಂದು ಆದೇಶಿಸಿತ್ತು. 

Tags:    

Similar News