ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್; ಜನಪ್ರತಿನಿಧಿಗಳ ಸಭೆ ಕರೆಯುವಂತೆ ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ
ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು, ಮಠಾಧೀಶರುಗಳ ಮೇಲೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ವಿಷಾದನೀಯ ಸಂಗತಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮುಖ್ಯಂಮತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ವಿ. ಸೋಮಣ್ಣ.
ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆ ಕುರಿತಂತೆ ಚರ್ಚಿಸಲು ಆ ಭಾಗದ ಎಲ್ಲ ಜನಪ್ರತಿನಿಧಿಗಳ ಸಭೆ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ವಿ. ಸೋಮಣ್ಣನವರು ಪತ್ರ ಬರೆದಿದ್ದಾರೆ.
ಈ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯ ಆಗುತ್ತಿದ್ದು, ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸುವಂತೆ ಸಾಕಷ್ಟು ಭಾರಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರೂ ಈ ಬಗ್ಗೆ ಗಮನಹರಿಸಿಲ್ಲ. ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು, ಮಠಾಧೀಶರುಗಳ ಮೇಲೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ವಿಷಾದನೀಯ ಸಂಗತಿ ಎಂದರು.
ಕಾಮಗಾರಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ, ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಲು ಈ ಭಾಗದ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಉಪಸ್ಥಿತಿಯಲ್ಲಿ ಏರ್ಪಡಿಸುವಂತೆ ಈ ಮೂಲಕ ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಕರಣ ಹಿಂಪಡೆಯಿರಿ
ಅನ್ಯಾಯದ ವಿರುದ್ದ ಹೋರಾಟಕ್ಕೆ ಇಳಿದಿದ್ದ ರೈತರು ಹಾಗೂ ಸಾರ್ವಜನಿಕರ ವಿರುದ್ದ ಪೊಲೀಸರು 13 ಪ್ರಕರಣಗಳನ್ನು ದಾಖಲಿಸಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆದಷ್ಟು ಶೀಘ್ರವಾಗಿ ಈ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ತಿಳಿಸಿದ್ದಾರೆ.
ಯೋಜನೆಗೆ ವಿರೋಧವೇಕೆ ?
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹಾಗೂ ರಾಮನಗರದ ಮಾಗಡಿ ತಾಲೂಕಿಗೆ ನೀರು ಹರಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪೈಪ್‌ಲೈನ್ ಅಳವಡಿಸುತ್ತಿರುವುದು ರೈತರು ಹಾಗೂ ರಾಜಕೀಯ ಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.