Weather Update | ಗುಡುಗು-ಸಿಡಿಲು ಸಹಿತ ಮಳೆ: ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್
ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನಗಳನ್ನು ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಲಾಯಿತು. ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದಿರುಗಿಸಲಾಗಿದೆ.;
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ವಾತಾವರಣ ಉಂಟಾಗಿತ್ತು. ಈ ನಡುವೆ ಬುಧವಾರ ರಾತ್ರಿ ರಾಜ್ಯದ ಹಲವೆಡೆ ಏಕಾಏಕಿ ಮಳೆಯಾಗಿದ್ದು, ಇಳೆಗೆ ತುಸು ತಂಪು ಮೂಡಿಸಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದ್ದು, ಗುಡುಗು ಮತ್ತು ಸಿಡಿಲಿನ ಅಬ್ಬರವೂ ಕಂಡುಬಂದಿದೆ. ಮಳೆಯ ಪರಿಣಾಮ, ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನಗಳನ್ನು ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಲಾಯಿತು. ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದಿರುಗಿಸಲಾಗಿದೆ.
ಮಂಗಳೂರಿನ ಬಜ್ಪೆ ಹಾಗೂ ಕಿನ್ನಿಪದವು ಪ್ರದೇಶಗಳಲ್ಲಿ ಸಿಡಿಲು ಬಡಿದ ಪರಿಣಾಮ, ತೆಂಗಿನ ಮರಕ್ಕೆ ಬೆಂಕಿ ತಗುಲಿದ ಘಟನೆ ನಡೆದಿದೆ. ಅದೇ ರೀತಿ, ಸುಳ್ಯ ಮತ್ತು ಕಡಬ ಭಾಗದಲ್ಲೂ ಮಳೆಯಾಗಿದ್ದು, ಕರಾವಳಿಯ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ತಾತ್ಕಾಲಿಕವಾಗಿ ತಂಪನ್ನು ನೀಡಿದೆ. ಕಡಬದಲ್ಲಿ ಗಾಳಿ ಸಹಿತ ಸುರಿದ ಮಳೆಯಿಂದ ಜನಜೀವನ ಕೆಲಮಟ್ಟಿಗೆ ಅಸ್ತವ್ಯಸ್ತಗೊಂಡಿದೆ.
ಮಲೆನಾಡು ಭಾಗದಲ್ಲೂ ಮಳೆಯ ಕೃಪೆ ದೊರಕಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ತಾಪಮಾನದಲ್ಲಿ ಇಳಿಕೆಯನ್ನು ಉಂಟುಮಾಡಿದೆ. ಮೂಡಿಗೆರೆ, ಕಳಸ, ಎನ್.ಆರ್. ಪುರ ತಾಲ್ಲೂಕಿನ ವಿವಿಧೆಡೆ ಮಳೆಯಾಗಿ ಮಲೆನಾಡಿನ ಜನತೆ ಸಂತಸಗೊಂಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಭೂಮಿ ತಂಪಾಗಿಸಿದೆ. ತುಮಕೂರಿನಲ್ಲಿಯೂ ಗುಡುಗು, ಗಾಳಿಯೊಂದಿಗೆ ಮಳೆಯಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ತಂಪಿನ ಅನುಭವ ನೀಡಿದೆ.
ರಾಜ್ಯದ ಬಹುತೇಕ ಪ್ರದೇಶಗಳು ಪ್ರಖರ ಬಿಸಿಲಿನ ಅಬ್ಬರದಲ್ಲಿದ್ದರೂ, ಕೆಲವೆಡೆ ಬಂದ ಆಕಸ್ಮಿಕ ಮಳೆಯು ತಂಪು ನೀಡುವುದರ ಜೊತೆಗೆ ಕೆಲವು ಅವಾಂತರಗಳನ್ನೂ ಸೃಷ್ಟಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮಳೆಯಾದರೂ, ಮುಂದಿನ ಎರಡು ದಿನಗಳ ಕಾಲ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಆಗಿರಬಹುದೆಂದು ಅಂದಾಜಿಸಲಾಗಿದೆ. ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಬಹುದು, ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.