Bangalore Stampade |ದುರ್ಘಟನೆ ಬಳಿಕ ಸಭೆ, ಸಮಾರಂಭಗಳಿಗೆ ಮಾರ್ಗಸೂಚಿ ಪ್ರಕಟಿಸಲು ಹೊರಟ ಗೃಹ ಇಲಾಖೆ
ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಆದೇಶಿಸಲಾಗಿದೆ. ಅವರು ಯಾರೇ ಆಗಿರಲಿ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ವಿವರಣೆ ಮಾಡಲು ಹೋಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.;
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇನ್ನು ಮುಂದೆ ಯಾವುದೇ ದೊಡ್ಡ ಸಭೆ, ಸಮಾರಂಭ ಅಥವಾ ವಿಜಯೋತ್ಸವಗಳಿಗೆ ಹೊಸ ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಬಿಡುಗಡೆ ಮಾಡಿ ಕ್ರಮ ಕೈಗೊಂಡಿದೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಅಭಿಮಾನಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಅನಿರೀಕ್ಷಿತವಾಗಿ ದುರಂತ ನಡೆದು ಹೋಗಿದೆ. ಈ ಬಗ್ಗೆ ಮ್ಯಾಜೆಸ್ಟ್ರೆಟಿಯಲ್ ತನಿಖೆಗೆ ಸರ್ಕಾರ ಆದೇಶಿಸಿದೆ. ಲೋಪಗಳಿಗೆ ಕಾರಣರಾದವರು ಯಾರೇ ಆಗಿದ್ದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಕಾಲ್ತುಳಿತ ಸಂಭವಿಸಲು ಕಾರಣವಾದ ಅಂಶಗಳು ತನಿಖಾ ವರದಿಯಿಂದ ತಿಳಿದು ಬರಲಿದೆ. ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಎಸ್ಒಪಿ ಬಿಡುಗಡೆ
ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯಿಂದ ಒಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಇನ್ನು ಮುಂದೆ ಯಾವುದೇ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಕಾರ್ಯಕ್ರಮ ಮಾಡಬೇಕು ಎಂದು ತಿಳಿಸಿದರು.
ಎಂದಿಗೂ ಇಂತಹ ಘಟನೆಗಳು ಆಗಬಾರದು. ಅಮಾಯಕರ ಸಾವು ಆಗಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. ನಿನ್ನೆ ಶವಗಾರದಲ್ಲಿ ಮೃತದೇಹಗಳನ್ನು ನೋಡಿದಾಗ ದುಃಖವಾಯಿತು. 20 ರಿಂದ 25 ವರ್ಷ ವಯಸ್ಸಿನವರು ಸಂತೋಷದಿಂದ ಆಚರಣೆಗೆ ಬಂದು ಜೀವವನ್ನೇ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಯಾರೂ ಊಹೆ ಮಾಡಿರಲಿಲ್ಲ ಎಂದರು.
ವ್ಯಕ್ತಿಯೊಬ್ಬರು ತನಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಗೋಳಾಡುತ್ತಿದ್ದರು. ಮಗ ಕಾಲೇಜಿಗೆ ಹೋಗುವುದಾಗಿ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ. ಈಗ ಮೃತಪಟ್ಟಿದ್ದಾನೆ ಎಂದು ತಿಳಿಸಿದಾಗ ತುಂಬಾ ನೋವಾಯಿತು ಎಂದು ಹೇಳಿದರು.
ಬಿಎಂಆರ್ಸಿಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ 8.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ತನಿಖೆಯ ವರದಿ ಬರುವವರೆಗೂ ಏನನ್ನು ಹೇಳುವುದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡಿದ್ದೇವೆ. ಆರ್ಸಿಬಿ, ಕೆಎಸ್ಸಿಎ ಅವರೊಂದಿಗೆ ಸಭೆ ಮಾಡಲಾಗುವುದು. ತಾಂತ್ರಿಕವಾಗಿ ಏನೇ ಇದ್ದರೂ ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳುತ್ತಾರೆ. ಎಲ್ಲಿ ಮತ್ತು ಏನು ಲೋಪ ಆಗಿದೆ ಎಂಬುದು ಗೊತ್ತಾದ ಬಳಿಕ ತಪ್ಪು ಯಾರದ್ದು ಎಂಬುದು ತಿಳಿಯಲಿದೆ ಎಂದು ಹೇಳಿದರು.