Tattoo in Trouble | ಟ್ಯಾಟೂ ಪ್ರಿಯರಿಗೆ ಶಾಕ್! ಹೊಸ ಮಾರ್ಗಸೂಚಿ ಹೊರಡಿಸಲು ಸರ್ಕಾರ ಸಿದ್ಧತೆ

ಹಚ್ಚೆ ಶಾಯಿಗಾಗಿ ಭಾರತೀಯ ಮಾನದಂಡಗಳ ಬ್ಯೂರೋ ಇಲ್ಲ, ಮತ್ತು ಅದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ವ್ಯಾಪ್ತಿಯಲ್ಲೂ ಸೇರುವುದಿಲ್ಲ.;

Update: 2025-03-01 13:06 GMT
ಪ್ರಾತಿನಿಧಿಕ ಚಿತ್ರ

ಟ್ಯಾಟೂಗಳಲ್ಲಿ ಬಳಸುವ ಇಂಕ್‌ಗಳಲ್ಲಿ 22 ಹೆವಿ ಮೆಟಲ್ಸ್‌ ಕಂಡುಬಂದಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಭಾರತೀಯ ಔಷಧ ನಿಯಂತ್ರಕ ಮಹಾ ನಿರ್ದೇಶಕ(ಡಿಸಿಜಿಐ)ರಿಗೆ ಪತ್ರ ಬರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ರಾಜ್ಯದಲ್ಲಿ ಟ್ಯಾಟೂಗಳಲ್ಲಿ ಬಳಸುವ ಇಂಕ್‌ ಮಾದರಿಗಳಲ್ಲಿ 22 ಹೆವಿ ಮೆಟಲ್ಸ್‌ ಕಂಡುಬಂದಿದೆ. ಭಾರತೀಯ ಮಾನದಂಡಗಳ ಬ್ಯೂರೋ ಪ್ರಕಾರ ಹಚ್ಚೆಗಳಿಗೆ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಹೊರಡಿಸಲು ಬೇಡಿಕೆ ಇಡಲಾಗುವುದು. ದೂರುಗಳ ಆಧಾರದ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿತ್ತು. ಈ ಮಾದರಿಗಳ ವರದಿಯಲ್ಲಿ ಸೆಲೆನಿಯಮ್, ಕ್ರೋಮಿಯಂ, ಪ್ಲಾಟಿನಂ ಮತ್ತು ಆರ್ಸೆನಿಕ್‌ನಂತಹ ಭಾರ ಲೋಹಗಳು ಇರುವುದು ಪತ್ತೆಯಾಗಿದೆ. ಇದು ಬ್ಯಾಕ್ಟೀರಿಯಾ, ವೈರಲ್ ಮತ್ತು ಶಿಲೀಂಧ್ರಗಳ ಸೋಂಕು ಸೇರಿದಂತೆ ವಿವಿಧ ಚರ್ಮ ರೋಗಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. 

ಆದರೆ ಇವುಗಳನ್ನು ನಿಯಂತ್ರಿಸಲು ಪ್ರಸ್ತುತ ಯಾವುದೇ ಕಾನೂನು ಇಲ್ಲ. ಹಚ್ಚೆ ಶಾಯಿಗಾಗಿ ಭಾರತೀಯ ಮಾನದಂಡಗಳ ಬ್ಯೂರೋ ಇಲ್ಲ, ಮತ್ತು ಅದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ವ್ಯಾಪ್ತಿಯಲ್ಲೂ ಸೇರುವುದಿಲ್ಲ. ಶಾಯಿ ಮತ್ತು ಲೋಹಗಳ ಪ್ರಮಾಣವನ್ನು ಅಥವಾ ಅವುಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸದ್ಯ ಯಾವುದೇ ನಿಯಮಗಳಿಲ್ಲ ಎಂದು ಅವರು ತಿಳಿಸಿದ್ದಾರೆ. 

ಔಷಧ ನಿಯಂತ್ರಕರಿಗೆ ಪತ್ರ 

ದೇಶದಲ್ಲಿ ಆ ಕುರಿತ ಪ್ರಸ್ತುತ ಕಾನೂನು ಕೊರತೆ ಹಿನ್ನೆಲೆಯಲ್ಲಿ ಅದಕ್ಕಾಗಿ ಒಂದು ಪ್ರತ್ಯೇಕ ಪ್ರೋಟೋಕಾಲ್‌ ಬೇಕಿದೆ. ಇದು ಗಂಭೀರ ವಿಷಯ. ಸರ್ಕಾರ ಈ ವಿಷಯವನ್ನು ಕೇಂದ್ರದೊಂದಿಗೆ ಚರ್ಚಿಸಲಿದೆ. ನಮ್ಮ ಆಹಾರ ಸುರಕ್ಷತೆ ಮತ್ತು ಔಷಧ ಆಯುಕ್ತರು ಶೀಘ್ರದಲ್ಲೇ ಭಾರತೀಯ ಔಷಧ ನಿಯಂತ್ರಕ ಮಹಾನಿರ್ದೇಶಕರಿಗೆ(ಡಿಸಿಜಿಐ) ಪತ್ರ ಬರೆಯಲಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಬಿಐಎಸ್‌ಗೆ ಅನುಗುಣವಾಗಿ ಮಾನದಂಡಗಳನ್ನು ನಿಗದಿಪಡಿಸಲು ಒತ್ತಾಯಿಸಲಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಅಂತಹ ಪ್ರೋಟೋಕಾಲ್‌ ಜಾರಿಗೆ ಬಂದರೆ ಯಾವುದು ಸುರಕ್ಷಿತ ಮತ್ತು ಯಾವುದು ಅಸುರಕ್ಷಿತ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಕಾನೂನಿನ ಅಡಿಯಲ್ಲಿ ಸರಿಯಾದ ನಿಯಂತ್ರಣವನ್ನು ಖಚಿತಪಡಿಸುತ್ತದೆ ಎಂದು ಅವರು ತಿಳಿಸಿದರು. 

ಹಚ್ಚೆ ಶಾಯಿಯಲ್ಲಿ ಅಪಾಯಕಾರಿ ರಾಸಾಯನಿಕ

ಟ್ಯಾಟೂ ಇಂಕ್‌ಗಳಲ್ಲಿ ಅನೇಕ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿವೆ. ಅವುಗಳಲ್ಲಿ ಕೆಲವು ಮೇಲ್ಮೈಯಲ್ಲಿಯೇ ಉಳಿದಿದ್ದರೆ, ಇನ್ನು ಕೆಲವು ಚರ್ಮವನ್ನು ಭೇದಿಸಿ ಹಾನಿ ಮಾಡುತ್ತವೆ. ಹಚ್ಚೆ ಶಾಯಿಯಲ್ಲಿರುವ ರಾಸಾಯನಿಕಗಳು ನಿಧಾನವಾಗಿ ದೇಹದೊಳಗೆ ಕರಗಿ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಈ ವಿಷಯದ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿದರು. 

ಬ್ಯಾನ್ ಆಗುತ್ತಾ ಲಿಪ್​​ಸ್ಟಿಕ್, ಮೆಹೆಂದಿ?

ಲಿಪ್​​ಸ್ಟಿಕ್​ನಲ್ಲಿ ಕಳಪೆ ಗುಣಮಟ್ಟದ ಬಣ್ಣ, ವ್ಯಾಕ್ಸ್ ಬಳಕೆಯಿಂದಾಗಿ ಅಲರ್ಜಿಕ್ ರಿಯಾಕ್ಷನ್ ಜೊತೆಗೆ ಅವುಗಳನ್ನು ಬಳಸುವವರ ತುಟಿಗಳ ನ್ಯಾಚುರಲ್ ಪಿಂಗ್ಮೆಂಟೇಷನ್ ಹಾಳಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆ ಬಗ್ಗೆ ಪರಿಶೀಲಿಸಲು ಕೂಡ ಇಲಾಖೆ ಮುಂದಾಗಿದೆ. ಜೊತೆಗೆ ಕಳಪೆ ಗುಣಮಟ್ಟದ ಮೆಹೆಂದಿಯಿಂದ ಚರ್ಮ ರೋಗ, ಸ್ಕಿನ್ ಅಲರ್ಜಿ, ಕಡಿತದಂತಹ ಸಮಸ್ಯೆಯಿಂದ ಜನರು ಬಳಲುತ್ತಿರುವುದರಿಂದ ಮೆಹೆಂದಿ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದೂ ಅವರು ಹೇಳಿದ್ದಾರೆ.

Tags:    

Similar News