ಎನ್ಎಚ್ಎಂ ನೌಕರರ ವೇತನ ಪರಿಷ್ಕರಣೆ; ಸರ್ಕಾರದಿಂದ ಸುತ್ತೋಲೆ
ಎನ್ಎಚ್ಎಂ ವೈದ್ಯರು ಹಾಗೂ ಸಿಬ್ಬಂದಿಗಳ ಸೇವೆಯನ್ನು ಕಾಯಂ ಹಾಗೂ ವೇತನ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಎನ್ಎಚ್ಎಂ ನೌಕರರು ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರ ವೈದ್ಯರು ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳ ಮಾಡಿದೆ.;
ಸಾಂದರ್ಭಿಕ ಚಿತ್ರ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಬಿಬಿಎಸ್ ವೈದ್ಯಾಧಿಕಾರಿಗಳು, ಎಸ್ಎನ್ಸಿಯು ಹಾಗೂ ಐಸಿಯುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರು ಹಾಗೂ ಪ್ರಮುಖ ಕ್ಲಿನಿಕಲ್ ತಜ್ಞರ ವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಎನ್ಎಚ್ಎಂ ವೈದ್ಯರು ಹಾಗೂ ಸಿಬ್ಬಂದಿಯ ಸೇವೆ ಕಾಯಂಗೊಳಿಸಬೇಕು. ವೇತನ ಹೆಚ್ಚಳ ಮಾಡಬೇಕು ಎಂದು ಎನ್ಎಚ್ಎಂ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರ ವೈದ್ಯರು ಹಾಗೂ ಸಿಬ್ಬಂದಿಯ ವೇತನ ಹೆಚ್ಚಳ ಮಾಡಿದೆ.
ಎಂಬಿಬಿಎಸ್ ಪೂರೈಸಿದ ವೈದ್ಯರಿಗೆ ಈ ಮೊದಲು 46,895 ರಿಂದ 50,000 ರೂ. ನಿಗದಿಪಡಿಸಲಾಗಿತ್ತು. ಇದೀಗ 75,000 ರೂ. ಗೆ ಹೆಚ್ಚಳ ಮಾಡಲಾಗಿದೆ. ಪ್ರಮುಖ ಕ್ಲಿನಿಕಲ್ ಸ್ಪೆಷಲಿಸ್ಟ್ಗೆ 1,11,000 ರೂ. ನಿಂದ 1,40,000 ರೂ. ಗೆ ಹೆಚ್ಚಳ ಮಾಡಲಾಗಿದೆ. ಮೂರು ವರ್ಷದ ಸೇವಾನುಭವ ಹೊಂದಿರುವ ಶುಶ್ರೂಷಕರಿಗೆ 14,000 ರೂ. ನಿಂದ 22,000 ರೂ. ಗೆ ಹೆಚ್ಚಳ ಮಾಡಲಾಗಿದೆ.
ನೇಮಕಾತಿಗೆ ಮಾನದಂಡಗಳು
ಮೇಜರ್ ಕ್ಲಿನಿಕಲ್ ಸ್ಪೆಷಲಿಸ್ಟ್ಗಳ ಆರಂಭಿಕ ಮಾಸಿಕ ವೇತನ 1,40,000 ರೂ. ನಿಗದಿಪಡಿಸಲಾಗಿದೆ. ಅನುಭವಿ ಅಭ್ಯರ್ಥಿಗಳ ಮಾಸಿಕ ವೇತನವನ್ನು ಅವರ ಅನುಭವದ ಆಧಾರದ ಮೇಲೆ ಪ್ರತಿ ವರ್ಷಕ್ಕೆ ಶೇ 2.5 ರಷ್ಟು ಹೆಚ್ಚುವರಿಯಾಗಿ ನಿಗದಿಪಡಿಸಬಹುದು. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಶಿಫಾರಸುಗೊಂಡ ಅನುಭವಿ ಅಭ್ಯರ್ಥಿಗಳ ಪಟ್ಟಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ಅನುಮೋದನೆ ಪಡೆದು ಅಂತಿಮಗೊಳಿಸಬಹುದಾಗಿದೆ. ಕ್ಲಿನಿಕಲ್ ತಜ್ಞರ ಗರಿಷ್ಠ ವೇತನವನ್ನು 2,00,000 ರೂ. ಗಳಿಗೆ ಮಿತಿಗೊಳಿಸಲಾಗಿದೆ.
ಪ್ರಸ್ತಾಪಿತ ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯಿಸಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯು ಹಾಲಿ ವೇತನ ಶ್ರೇಣಿಯಲ್ಲಿಯೇ ಮಂದುವರಿಯಲಿದ್ದಾರೆ. ಹೊಸ ವೇತನ ಪಡೆಯಬೇಕಾದರೆ ಈ ನೌಕರರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿ ಮೂಲಕ ಹೆಚ್ಚುವರಿ ವೇತನ ಪಡೆಯಬಹುದಾಗಿದೆ. ಹೊಸ ನೇಮಕಾತಿ ಸಂದರ್ಭದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅವರ ಅನುಭವದ ಆಧಾರದ ಮೇಲೆ ಆದ್ಯತೆ ನೀಡಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.