OPS Demand Strike | ಹಳೆ ಪಿಂಚಣಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಪ್ರತಿಭಟನೆ

Old Pension Scheme: 2006 ರಿಂದ ನೌಕರಿಗೆ ಸೇರಿರುವವರಿಗೆ ಹಿಂದಿನ ಒಪಿಎಸ್‌ ಬದಲಾಗಿ ಎನ್​ಪಿಎಸ್ ​ಪಿಂಚಣಿ ನೀಡಲಾಗುತ್ತಿದೆ. ಆದರೆ, ತಮಗೆ ಎನ್‌ಪಿಎಸ್‌ ಬೇಡ, ಹಿಂದಿನ ಒಪಿಎಸ್‌ ಪಿಂಚಣಿ ವ್ಯವಸ್ಥೆಯೇ ಬೇಕು ಎಂದು ನೌಕರರು ಕಳೆದ ಕೆಲವು ವರ್ಷಗಳಿಂದ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ.;

Update: 2025-02-07 10:02 GMT
ಎನ್‌ಪಿಎಸ್

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ತರುವಂತೆ ಎನ್​ಪಿಎಸ್​ ನೌಕರರು ಶುಕ್ರವಾರ (ಫೆ.07) ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. 

2006 ರಿಂದ ಇತ್ತೀಚಿನವರೆಗೂ 2 ಲಕ್ಷದ 83 ಸಾವಿರ ಮಂದಿ ಸರ್ಕಾರಿ ನೌಕರಿಗೆ ಸೇರಿದ್ದಾರೆ. ಅವರಿಗೆ ಹಿಂದಿನ ಒಪಿಎಸ್‌ ಬದಲಾಗಿ ಎನ್​ಪಿಎಸ್ ​ಪಿಂಚಣಿ ನೀಡಲಾಗುತ್ತಿದೆ. ಆದರೆ, ತಮಗೆ ಎನ್‌ಪಿಎಸ್‌ ಬೇಡ, ಹಿಂದಿನ ಒಪಿಎಸ್‌ ಪಿಂಚಣಿ ವ್ಯವಸ್ಥೆಯೇ ಬೇಕು ಎಂದು ನೌಕರರು ಕಳೆದ ಕೆಲವು ವರ್ಷಗಳಿಂದ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ಅಂದರೇನು?

ಹಳೆಯ ಪಿಂಚಣಿ ಪರಿಷ್ಕರಿಸಿ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ಯನ್ನು ಕೇಂದ್ರ ಸರ್ಕಾರ 2004 ರಲ್ಲಿ ಜಾರಿಗೊಳಿಸಿದೆ. ಸದ್ಯ ಇದರಡಿ ರಾಜ್ಯದ ಸುಮಾರು ಅಂದಾಜು 4ಲಕ್ಷ ಉದ್ಯೋಗಿಗಳು ಇದ್ದಾರೆ.

ಎನ್‌ಪಿಎಸ್‌ ಯೋಜನೆಯಡಿ ನೌಕರರ ಮೂಲ ವೇತನ ಹಾಗೂ ತುಟ್ಟಿಭತ್ಯೆಯಲ್ಲಿ ಶೇ.10ರಷ್ಟು ವೇತನ ಕಡಿತವಾಗಲಿದೆ. ಇದಕ್ಕೆ ಸರ್ಕಾರ ಶೇ.14 ರಷ್ಟು ಕೊಡುಗೆ ನೀಡುತ್ತದೆ. ಒಟ್ಟು ಕ್ರೂಡೀಕರಣವಾದ ಶೇ.24 ರಷ್ಟು ವಂತಿಕೆಯನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಎಲ್‌ಐಸಿ, ಎಸ್‌ಬಿಐ ಹಾಗೂ ಖಾಸಗಿ ಬ್ಯಾಂಕ್ ಎಚ್‌ಡಿಎಫ್ ಯಲ್ಲಿ ಹೂಡಿಕೆ ಮಾಡಲಿದೆ. ಷೇರು ಮಾರುಕಟ್ಟೆಯ ಬೆಳವಣಿಗೆ ಆಧಾರದ ಮೇಲೆ ನಿವೃತ್ತಿಯ ನಂತರ ನೌಕರರಿಗೆ ಪಿಂಚಣಿ ನಿಗದಿಯಾಗಲಿದೆ. ಹಾಗಾಗಿ ಎನ್‌ಪಿಎಸ್‌ ನಿವೃತ್ತ ನೌಕರರ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ.

ಹೀಗೆ ನಿವೃತ್ತ ನೌಕರರಿಂದ ಸಂಗ್ರಹಿಸಿದ ಒಟ್ಟು ವಂತಿಗೆಯ ಶೇ.60ರಷ್ಟು ಹಣವನ್ನು ನಿವೃತ್ತಿಯ ಬಳಿಕ ಒಂದೇ ಕಂತಿನಲ್ಲಿ ನೀಡಲಾಗುತ್ತದೆ. ಉಳಿದ ಶೇ.40ರಷ್ಟು ಹಣವನ್ನು ಮತ್ತೆ ಹೂಡಿಕೆ ಮಾಡಿ, ಮಾರುಕಟ್ಟೆ ಬೆಳವಣಿಗೆ ಆಧಾರದ ಮೇಲೆ ಪಿಂಚಣಿ ರೂಪದಲ್ಲಿ ನೀಡುತ್ತದೆ. ಉದಾಹರಣೆಗೆ 1.20 ಲಕ್ಷ ರೂ. ವೇತನ ಪಡೆಯುವ ಸರ್ಕಾರಿ ನೌಕರರೊಬ್ಬರು ಎನ್‌ಪಿಎಸ್ ಯೋಜನೆಯಡಿ ನಿವೃತ್ತಿ ಬಳಿಕ ಕೇವಲ 5 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ. ಒಮ್ಮೆ ನಿಗದಿಯಾದ ಪಿಂಚಣಿ ದರ ಜೀವಿತಾವಧಿವರೆಗೆ ಮುಂದುವರಿಯಲಿದೆ.

ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಅಂದರೇನು?

ಹಳೆಯ ಪಿಂಚಣಿ ಯೋಜನೆಯನ್ನು 2004 ರಲ್ಲಿ ಕೇಂದ್ರ ಸರ್ಕಾರ ಹಿಂಪಡೆದಿತ್ತು. ಆದರೆ, ಒಪಿಎಸ್ ಮರು ಜಾರಿಯ ಆಯ್ಕೆಯನ್ನು ರಾಜ್ಯಗಳಿಗೆ ಬಿಟ್ಟಿತ್ತು. ಈ ಯೋಜನೆಯಡಿ ನೌಕರರ ವೇತನದಲ್ಲಿ ಯಾವುದೇ ವಂತಿಕೆಯನ್ನು ಕಡಿತ ಮಾಡುವುದಿಲ್ಲ. ನಿವೃತ್ತಿಯ ನಂತರ ನೌಕರರ ಮೂಲ ವೇತನದ ಶೇ 50 ರಷ್ಟು ಹಣವನ್ನು ಸರ್ಕಾರವೇ ಪಿಂಚಣಿ ರೂಪದಲ್ಲಿ ನೀಡಲಿದೆ. ಜೊತೆಗೆ ಕಾಲಕಾಲಕ್ಕೆ ನಡೆಯುವ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಏರಿಕೆಯ ಲಾಭವೂ ಇವರಿಗೆ ಸಿಗಲಿದೆ. 1992 ರಲ್ಲಿ ಒಪಿಎಸ್ ವ್ಯಾಪ್ತಿಯಲ್ಲಿದ್ದ ನೌಕರರು 42ಸಾವಿರ ರೂ. ಮೂಲ ವೇತನ ಪಡೆಯುತ್ತಿದ್ದರೆ, ನಿವೃತ್ತಿಯ ನಂತರ ಪಿಂಚಣಿ ರೂಪದಲ್ಲಿ 21 ಸಾವಿರ ರೂ. ಪಿಂಚಣಿ ಸಿಗುತ್ತಿತ್ತು. ಈಗ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಹೆಚ್ಚಳದ ಕ್ರಮಗಳಿಂದಾಗಿ ಅವರ ಪಿಂಚಣಿ ಮೊತ್ತ 68 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಹಾಗಾಗಿ ಒಪಿಎಸ್ ಮರುಜಾರಿಗೆ ಹೆಚ್ಚು ಒತ್ತಡ ಹಾಕಲಾಗುತ್ತಿದೆ. ಇನ್ನು ಒಪಿಎಸ್ ನಲ್ಲಿ ಮೂಲವೇತನದ ಶೇ 50ರಷ್ಟು ಪಿಂಚಣಿ ಪಡೆಯಬೇಕಾದರೆ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿರಬೇಕು. ಇನ್ನು ಒಪಿಎಸ್‌ ಗೆ ಒಳಪಡಲು 20ವರ್ಷ ಸೇವೆ ಸಲ್ಲಿಸಿರಬೇಕಾಗುತ್ತದೆ.

ವಿಪರ್ಯಾಸವೆಂದರೆ 2006ರಲ್ಲಿ ಮಾರ್ಚ್ 31 ರಂದು ಸರ್ಕಾರಿ ಸೇವೆಗೆ ಸೇರಿದವರು ಹಾಗೂ 2006ಏಪ್ರಿಲ್ 1ರಂದು ನೇಮಕವಾದವರ ನಡುವೆ ಎನ್‌ಪಿಎಸ್ ಯೋಜನೆಯಿಂದಾಗಿ ಒಂದೇ ದಿನದ ಅಂತರದಲ್ಲಿ ಕನಿಷ್ಠ 5 ಸಾವಿರ ವೇತನ ವ್ಯತ್ಯಾಸವಿದೆ. ನೇಮಕಾತಿಯಲ್ಲಿ ಕೇವಲ ಒಂದು ದಿನ ವ್ಯತ್ಯಾಸದಿಂದಲೇ ಇಷ್ಟೊಂದು ವೇತನ ತಾರತಮ್ಯದಿಂದ ಕೂಡಿದೆ.

Tags:    

Similar News