ಪುರುಷರಿಗೆ ಆಸನ ಬಿಟ್ಟು ಕೊಡಿ: ಕೆಎಸ್​ಆರ್​ಟಿಸಿ ಮೈಸೂರು ವಿಭಾಗದಿಂದ ಆದೇಶ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗ ʻಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟುʼಗಳನ್ನು ಅವರಿಗೆ ಬಿಟ್ಟುಕೊಡಬೇಕು ಅಧಿಕೃತ ಆದೇಶ ಹೊರಡಿಸಿದೆ.;

Update: 2025-02-21 07:12 GMT
ಕೆಎಸ್‌ಆರ್‌ಟಿಸಿ

ರಾಜ್ಯದಲ್ಲಿ ಶಕ್ತಿ ಯೋಜನೆ ಬಳಿಕ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು ಗೊತ್ತಿರುವ ಸಂಗತಿಯೇ. ಆದರೆ, ಅದರಿಂದಾಗಿ ಪುರುಷ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದುಸ್ತರವಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಅದರಲ್ಲೂ ಬಸ್ಸಿನ ಆಸನಗಳನ್ನೆಲ್ಲಾ ಮಹಿಳೆಯರೇ ಆಕ್ರಮಿಸುತ್ತಿದ್ದು, ಪುರುಷರಿಗೆ ಕುಳಿತು ಪ್ರಯಾಣಿಸುವುದೇ ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಆ ಹಿನ್ನೆಲೆಯಲ್ಲಿ ವ್ಯಾಪಕ ದೂರುಗಳು ಸಾರಿಗೆ ನಿಗಮಗಳಿಗೆ ಬರುತ್ತಿದ್ದು, ಇದೀಗ ಅಂತಹ ದೂರುಗಳನ್ನು ಪರಿಗಣಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗ ʻಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟುಗಳನ್ನು ಅವರಿಗೆ ಬಿಟ್ಟುಕೊಡಬೇಕುʼ ಎಂದು ಅಧಿಕೃತ ಆದೇಶ ಹೊರಡಿಸಿದೆ. 

ಕೆಎಸ್‌ಆರ್‌ಟಿಸಿ ಆದೇಶದಲ್ಲಿ ಏನಿದೆ?

ಪುರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳೆಯರು ಕುಳಿತು ಪ್ರಯಾಣಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗುತ್ತಿದೆ. ಮೈಸೂರು ನಗರ ಸಾರಿಗೆ ವಾಹನಗಳಲ್ಲಿನ ಮರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದು, ಪುರುಷ ಪ್ರಯಾಣಿಕರಿಗೆ ಆಸನಗಳು ಸಿಗುವುದಿಲ್ಲವೆಂದು ವಿಷ್ಣುವರ್ಧನ.ಎಸ್ ಎಂಬವರು ಕೇಂದ್ರ ಕಚೇರಿಗೆ ದೂರು ಸಲ್ಲಿಸಿರುವುದು ಸರಿಯಷ್ಟೆ. ಅದರಂತೆ ತಮ್ಮ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಹಾಗೂ ತೆಗೆದುಕೊಂಡ ಕ್ರಮದ ಉರಿತು ಅನುಸರಣಾ ವರದಿ ಕಳುಹಿಸಬೇಕು ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕೆಎಸ್​ಆರ್​ಟಿಸಿ ಆದೇಶದ ಪ್ರತಿ

ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದ ಸರ್ಕಾರಿ ಬಸ್ಸುಗಳು ಮಹಿಳಾ ಬಸ್ಸುಗಳಾಗಿ ಬದಲಾಗಿದೆ. ಉಚಿತ ಪ್ರಯಾಣ ಘೋಷಣೆಯಾದ ದಿನದಿಂದ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಮಗೆ ಸೀಟು ಸಿಗುತ್ತಿಲ್ಲ ಎಂದು ಪುರುಷರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದುಡ್ಡು ಕೊಟ್ಟು ಟಿಕೆಟ್‌ ಪಡೆದರೂ ನಮಗೆ ಸೀಟು ಸಿಗುತ್ತಿಲ್ಲ. ನಿಂತುಕೊಂಡೇ 60-70 ಕಿ.ಮೀ ದೂರ ಪ್ರಯಾಣ ಮಾಡುವ ಪರಿಸ್ಥಿತಿ ಹಲವು ಭಾಗಗಳಲ್ಲಿ ನಿರ್ಮಾಣವಾಗಿದೆ ಎಂದು ಪುರುಷರು ಸಿಟ್ಟು ಹೊರಹಾಕುತ್ತಿದ್ದಾರೆ.

Tags:    

Similar News