ಅಡುಗೆ ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರು ಮಕ್ಕಳು ಹಾಗೂ ತಂದೆತಾಯಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಕುಮಾರಸ್ವಾಮಿ (45), ಪತ್ನಿ ಮಂಜುಳಾ (39), ಪುತ್ರಿಯರಾದ ಅರ್ಚನಾ (19) ಮತ್ತು ಸ್ವಾತಿ (17) ಎಂದು ಗುರುತಿಸಲಾಗಿದೆ.
ಮೂಲತಃ ಚಿಕ್ಕಮಗಳೂರು ಸಖರಯಪಟ್ಟಣದ ಕುಟುಂಬ ಕಳೆದ 30 ವರ್ಷದಿಂದ ಮೈಸೂರಿನಲ್ಲಿ ವಾಸವಾಗಿದೆ. ನಾಲ್ವರೂ ಕಳೆದ ಗುರುವಾರ ಗುರುವಾರ ಸಂಬಂಧಿಕರ ಮದುವೆ ಹೋಗಿದ್ದರು. ಮದುವೆ ಮುಗಿಸಿಕೊಂಡು ತಮ್ಮ ಊರಾದ ಸಖರಯಪಟ್ಟಣಕ್ಕೆ ಹೋಗಿದ್ದರು. ಅಲ್ಲಿಂದ ಸೋಮವಾರ ಬೆಳಗ್ಗೆ ಮೈಸೂರಿಗೆ ವಾಪಸ್ಸಾಗಿದ್ದರು.
ಸೋಮವಾರ ರಾತ್ರಿ ಅನಿಲ ಸೋರಿಕೆಯಿಂದ ವಿಷ ಅನಿಲ ಸೇವಿಸಿ ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮಂಗಳವಾರ (ಮೇ 21) ಇಡೀ ದಿನ ಮನೆಯ ಬಾಗಿಲು ತೆರೆದಿರಲಿಲ್ಲ. ಇಂದು (ಮೇ 21) ಅರ್ಚನಾ ಮತ್ತು ಸ್ವಾತಿ ಕಾಲೇಜು ಸ್ನೇಹಿತರು ಮನೆ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ನಾಲ್ಕು ಗ್ಯಾಸ್ ಪತ್ತೆಯಾಗಿವೆ.
ಮೃತ ಕುಮಾರಸ್ವಾಮಿ ಅವರು ಗ್ಯಾಸ್ ಸಿಲಿಂಡರ್ ಬಳಸಿ ಇಸ್ತ್ರಿಪೆಟ್ಟಿಗೆ ಬಳಸುತ್ತಿದ್ದರು. ಆ ಗ್ಯಾಸ್ ಸೋರಿಕೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಲಿದೆ.