ಭಯೋತ್ಪಾದನೆ ನಿಯಂತ್ರಣಕ್ಕೆ ಟಾಸ್ಕ್‌ ಫೋರ್ಸ್‌ ರಚಿಸಿ: ಆರ್‌. ಅಶೋಕ ಆಗ್ರಹ

ಭಯೋತ್ಪಾದಕರು ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸುವ ಸಂಚು ಮಾಡಿದ್ದು ಅತ್ಯಂತ ಖಂಡನೀಯ. ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಕಾಂಗ್ರೆಸ್‌ ಸರ್ಕಾರ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ;

Update: 2024-09-10 09:36 GMT
ಆರ್‌ ಅಶೋಕ್‌
Click the Play button to listen to article

ಭಯೋತ್ಪಾದಕರು ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸುವ ಸಂಚು ಮಾಡಿದ್ದು ಅತ್ಯಂತ ಖಂಡನೀಯ. ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಕಾಂಗ್ರೆಸ್‌ ಸರ್ಕಾರ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ, ಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ ಆರ್ಥಿಕತೆಯನ್ನು ನಾಶ ಮಾಡಬೇಕೆಂದು ಭಯೋತ್ಪಾದಕರು ಯೋಜನೆ ರೂಪಿಸಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯರೊಬ್ಬರು, ಬಾಂಗ್ಲಾ ಮಾದರಿ ಹಲ್ಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು. ಬಾಂಗ್ಲಾದೇಶದಿಂದಲೂ ಹಲವರು ಆಧಾರ್‌ ಕಾರ್ಡ್‌ ಪಡೆದು ಬೆಂಗಳೂರಿಗೆ ಬರುತ್ತಿದ್ದಾರೆ. ಇದರಿಂದ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಿದೆ. ರಾಜ್ಯ ಗೃಹ ಇಲಾಖೆ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಕ್ಕೆ ನುಸುಳುವ ಬಾಂಗ್ಲಾ ಪ್ರಜೆಗಳನ್ನು ಕೂಡಲೇ ಪತ್ತೆ ಮಾಡಿ ಅವರನ್ನು ಹೊರಕ್ಕೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಇಲ್ಲವಾದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಸ್ಥಿತಿಯೇ ರಾಜ್ಯಕ್ಕೂ ಬರಲಿದೆ. ನಮ್ಮ ರಾಜ್ಯದ ಜನರ ಬದುಕು ಭಯೋತ್ಪಾದಕರ ನಿಯಂತ್ರಣಕ್ಕೆ ಹೋಗಬಾರದು. ಸ್ಲೀಪರ್‌ ಸೆಲ್‌ಗಳನ್ನು ಪತ್ತೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್‌ ಸಚಿವರು ನಿರಾಕರಿಸಿದ್ದರು. ಪದೇ ಪದೆ ಭಯೋತ್ಪಾದಕರಿಗೆ ಪ್ರೇರಣೆಯಾಗುವ ಹೇಳಿಕೆಗಳನ್ನು ಕಾಂಗ್ರೆಸ್‌ ನಾಯಕರು ನೀಡಿದ್ದಾರೆ. ಇದರಿಂದಾಗಿ ಭಯೋತ್ಪಾದನೆಗೆ ಕುಮ್ಮಕ್ಕು ದೊರೆತಿದೆ. ಕರ್ನಾಟಕದಲ್ಲೇ ಭಯೋತ್ಪಾದನೆ ಮಾಡಿದರೆ ಏನೂ ತೊಂದರೆ ಇಲ್ಲ ಎಂದು ಭಯೋತ್ಪಾದಕರಿಗೆ ಅನ್ನಿಸಿದೆ. ಇದಕ್ಕಾಗಿ ಇಲ್ಲಿ ಹೆಚ್ಚು ಉಗ್ರ ಚಟುವಟಿಕೆ ನಡೆಯುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದಕರಿಗೆ ಭಯವೇ ಇಲ್ಲ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾದಾಗ, ಇದು ವ್ಯಾಪಾರ ವ್ಯಾಜ್ಯ ಎಂದು ಸಚಿವರು ಹೇಳಿದ್ದರು. ಇದರಿಂದಾಗಿಯೇ ಭಯೋತ್ಪಾದನಾ ಚಟುವಟಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಮೇಶ್ವರಂ ಕೆಫೆ ಬದಲಾಗಿ ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸಬೇಕೆಂದು ಯೋಜನೆ ರೂಪಿಸಲಾಗಿತ್ತು. ಈ ಪ್ರಕರಣದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲು ಪ್ಲಾನ್‌ ಮಾಡಲಾಗಿತ್ತು ಎಂದರು.

ಕಾಂಗ್ರೆಸ್‌ ನಾಯಕರಿಗೆ ಹೆಚ್ಚು ವಿಶ್ವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್‌ ನಾಯಕರಿಗೆ ಹೆಚ್ಚಿನ ವಿಶ್ವಾಸವಿದೆ. ಅದಕ್ಕಾಗಿ ಸಿಎಂ ಕುರ್ಚಿಗೆ ಸ್ಪರ್ಧೆ ಹೆಚ್ಚಿದ್ದು, ಎಲ್ಲರೂ ಮುಖ್ಯಮಂತ್ರಿಯಾಗುತ್ತೇನೆಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು.

Tags:    

Similar News