ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲು
ಸೂಲಿಬೆಲೆ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.;
ಚಕ್ರವರ್ತಿ ಸೂಲಿಬೆಲೆ
ಹಿಂದೂಪರ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಕ್ಷಿಣ ಕನ್ನಡದ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 9 ರಂದು ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಪಾದಯಾತ್ರೆಯ ಸಮಾರೋಪದಲ್ಲಿ ಭಾಗವಹಿಸಿದ್ದ ಸೂಲಿಬೆಲೆ, ಅನ್ಯ ಸಮಾಜದವರನ್ನು ಪ್ರೀತಿಸಿ ಮದುವೆಯಾಗುವಂತೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್ ಮುಖಂಡ ರಶೀದ್ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೂಲಿಬೆಲೆ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
"ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರುತ್ತೇವೆ? ಸ್ವಲ್ಪ ಬದಲಾವಣೆ ತರೋಣ. ನಮ್ಮ ಗಂಡು ಮಕ್ಕಳಿಗೂ ಈ ಬಗ್ಗೆ ಹೇಳಬೇಕು. ಎಷ್ಟು ದಿನ ನಮ್ಮ ಹೆಣ್ಣುಮಕ್ಕಳನ್ನು ನೋಡುತ್ತಿರುತ್ತಾರೆ? ಹುಡುಗಿ ಸಿಗಲಿಲ್ಲ ಹುಡುಗಿ ಸಿಗಲಿಲ್ಲ ಅಂತ ಎಷ್ಟು ದಿನ ಹೇಳುತ್ತಿರುತ್ತಾರೆ? ಸ್ವಲ್ಪ ಬೇರೆಯವರನ್ನು ನೋಡಲಿ ಅಲ್ವಾ? ನಮ್ಮ ಸಮಾಜದಲ್ಲಿ ನಾವು ನಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿಲ್ಲವೆಂದು ಆಲೋಚನೆ ಮಾಡುತ್ತಿರುವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಗಳು ಇದೆ ಅಲ್ವಾ, ಧೈರ್ಯ ತುಂಬಿ ಅಲ್ವಾ? ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಅವರು ಹಿಂದೂ ಯುವಕರಿಗೆ ಕರೆ ಕೊಟ್ಟಿದ್ದರು.
ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಜೋರಾಗಿದೆ. ಅದರಲ್ಲೂ ಎಸ್ಡಿಪಿಎಸ್ ತೀವ್ರವಾಗಿ ವಿರೋಧಿಸಿದ್ದು, ನಿಮ್ಮ ಕುಟುಂಬದ ಎಷ್ಟು ಜನ ಅನ್ಯಧರ್ಮೀಯರನ್ನು ವಿವಾಹವಾಗಿದ್ದಾರೆ? ಹಿಂದೂ ಧರ್ಮದ ಯುವತಿಯರನ್ನು ಮದುವೆಯಾಗಲು ಯಾವ ಧರ್ಮದವರಿಗೆ ಕಾಂಟ್ರ್ಯಾಕ್ಟ್ ಕೊಟ್ಟಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು.