ಥೇಲ್ಸ್ ಕಂಪನಿ ಸ್ಥಾಪನೆಯಿಂದ ಸ್ಥಳಿಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ: ಸಚಿವ ಎಂ.ಬಿ. ಪಾಟೀಲ್
ಏವಿಯಾನಿಕ್ಸ್, ವಿಮಾನ ಸಂಚಾರ ನಿರ್ವಹಣೆ, ಸಂಪರ್ಕ ಸುಧಾರಣೆ ಮತ್ತು ವೈಮಾನಿಕ ನಿರ್ವಹಣೆ ಚಟುವಟಿಕೆಗಳು ನಡೆಯಲಿವೆ ಹಾಗೂ ಉದ್ಯಮಗಳಿಗೆ ಬೇಕಾದ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಸಜ್ಜುಗೊಳಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.;
ಕರ್ನಾಟಕದ ಸಾರ್ವಜನಿಕ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜತೆ ದೀರ್ಘಕಾಲದ ಸಹಭಾಗಿತ್ವ ಹೊಂದಿರುವ ಫ್ರೆಂಚ್ ಬಹುರಾಷ್ಟ್ರೀಯ ಕಂಪನಿ ಥೇಲ್ಸ್, ರಾಜ್ಯದಲ್ಲಿ ನೂತನವಾಗಿ ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್ಟೇನ್ಮೆಂಟ್ ಮತ್ತು ಸರ್ವೀಸಸ್ ಲ್ಯಾಬ್ನ್ನು ನಿರ್ಮಿಸಿ, ಬುಧವಾರ (ಜೂನ್ 4) ಉದ್ಘಾಟಿಸಿದೆ. ಈ ಸ್ಥಾವರದಿಂದ ಸ್ಥಳೀಯ ಪ್ರತಿಭಾವಂತ ಎಂಜಿನಿಯರುಗಳಿಗೆ ಮಹತ್ವದ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಲಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
"ಥೇಲ್ಸ್ ಕಂಪನಿ ರಾಜ್ಯದಲ್ಲಿ ತನ್ನ ಎರಡನೇ ಕಚೇರಿ ಆರಂಭಿಸಿರುವುದು ಸ್ವಾಗತಾರ್ಹ. ಈ ಸ್ಥಾವರದಲ್ಲಿ ಏವಿಯಾನಿಕ್ಸ್, ವಿಮಾನ ಸಂಚಾರ ನಿರ್ವಹಣೆ, ಸಂಪರ್ಕ ಸುಧಾರಣೆ ಮತ್ತು ವೈಮಾನಿಕ ನಿರ್ವಹಣೆ ಚಟುವಟಿಕೆಗಳು ನಡೆಯಲಿವೆ. ಇದು ಉದ್ಯಮಗಳಿಗೆ ಬೇಕಾದ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಸಜ್ಜುಗೊಳಿಸಲು ನೆರವಾಗುತ್ತದೆ. ಇದರಿಂದಾಗಿ ಕರ್ನಾಟಕದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ವಲಯಗಳಿಗೆ ಮತ್ತಷ್ಟು ಬಲ ಬರಲಿದೆ ಎಂದು ಹೇಳಿದರು.
ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಕೈಗಾರಿಕೆಗಳಲ್ಲಿ ಕರ್ನಾಟಕದ ಪಾಲು ಶೇ. 65ರಷ್ಟು. ಈ ಕ್ಷೇತ್ರದಲ್ಲಿ ರಾಜ್ಯವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಸರ್ಕಾರದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯ ಫಲವಾಗಿ, ಟಾಟಾ ಸಮೂಹವು ಎಚ್ 125 ದರ್ಜೆಯ ಹೆಲಿಕಾಪ್ಟರ್ಗಳ ಬಿಡಿಭಾಗಗಳ ಜೋಡಣೆ ಘಟಕವನ್ನು ಆರಂಭಿಸಿದೆ. ಇಂಡಿಗೋ ಕಂಪನಿಯ ಎಂ.ಆರ್.ಒ ಸ್ಥಾವರ ಮತ್ತು ಸಾಫ್ರಾನ್ ಕಂಪನಿಯ ಏವಿಯಾನಿಕ್ಸ್ ಘಟಕಗಳು ಕೂಡ ರಾಜ್ಯದಲ್ಲಿ ಶುರುವಾಗುತ್ತಿವೆ. ಇವು ಉದ್ಯೋಗ ಸೃಷ್ಟಿಯ ಜತೆಗೆ ಸ್ಥಳೀಯ ಉದ್ಯಮಿಗಳು ಮತ್ತು ಸೇವಾದಾರರಿಗೂ ಉಜ್ವಲ ಅವಕಾಶಗಳನ್ನು ನಿರ್ಮಿಸುತ್ತಿವೆ ಎಂದು ನುಡಿದರು.
ಜಾಗತಿಕ ಮಟ್ಟದಲ್ಲಿ ವೈಮಾನಿಕ ಎಂಜಿನ್ ತಯಾರಿಸುವ ರೋಲ್ಸ್ ರಾಯ್ಸ್, ಅಡ್ವಾನ್ಸ್ಡ್ ಮೆಟೀರಿಯಲ್ಸ್ ತಯಾರಿಸುವ ನೋಪೋ ನ್ಯಾನೋಟೆಕ್, ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ ಅಭಿವೃದ್ಧಿಗೆ ಹೆಸರಾಗಿರುವ ಪಿಕ್ಸೆಲ್, ಮತ್ತು ಯುಎವಿ (ಅನ್-ಮ್ಯಾನ್ಡ್ ಏರಿಯಲ್ ವೆಹಿಕಲ್ಸ್) ಸಾಧನಗಳನ್ನು ಅಭಿವೃದ್ಧಿಪಡಿಸುವ ನ್ಯೂ ಸ್ಪೇಸ್ ರೀಸರ್ಚ್ ಸೇರಿದಂತೆ ಹಲವು ಕಂಪನಿಗಳು ರಾಜ್ಯದಲ್ಲಿ ನೆಲೆಯೂರಿರುವುದರಿಂದ, ಮುಂದಿನ ದಿನಗಳಲ್ಲಿ ಕರ್ನಾಟಕ ವೈಮಾನಿಕ ನವೋದ್ಯಮಗಳ ಹಬ್ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.