ಬೆಂಗಳೂರು: ಮಳೆಯ ನಡುವೆಯೂ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್
ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಬಿಎಂಟಿಸಿ ನಡೆಸುತ್ತಿದ್ದ ಎಲೆಕ್ಟ್ರಿಕ್ ಬಸ್ ಕೆಂಪಾಪುರ ಬಳಿ ಬೆಂಕಿಗೆ ಆಹುತಿಯಾಗಿದೆ.;
ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬೆಂಕಿಗಾಹುತಿಯಾಗಿರುವ ಘಟನೆ ನಾಗವಾರ – ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಕಳದ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿತ್ತು.ಈ ಮಳೆಯಿಂದ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಇದೇ ಮಾರ್ಗದಲ್ಲಿ ಬರುತ್ತಿದ್ದ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ.
ಬಸ್ ಕೆಂಪಾಪುರ ಬಳಿ ಬರುತ್ತಿದ್ದಂತೆ ಜಲಾವೃತಗೊಂಡ ರಸ್ತೆಯಲ್ಲಿ ವಾಹನ ಏಕಾಏಕಿ ನಿಂತಿತು.ಆ ವೇಳೆ ಬಸ್‌ನಲ್ಲಿ ಸುಮಾರು 10-15 ಮಂದಿ ಪ್ರಯಾಣಿಕರಿದ್ದು, ತಕ್ಷಣವೇ ಪ್ರಯಾಣಿಕರನ್ನು ಇಳಿಸಲಾಯಿತು. ಬಳಿಕ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಬಸ್ ಆಫ್ ಆದ 30-40 ನಿಮಿಷದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆಗ ಚಾಲಕ, ನಿರ್ವಾಹಕ ಬಸ್‌ನಿಂದ ಹೊರಬಂದಿದ್ದಾರೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ಬಳಿಕ ವಾಹನವನ್ನು ಹೆಚ್ಚುವರಿ ತಪಾಸಣೆಗಾಗಿ ಕೆಂಗೇರಿ ಡಿಪೋಗೆ ಸಾಗಿಸಲಾಯಿತು. ಈ ಹಿಂದೆ ಎಲೆಕ್ಟ್ರಿಕ್ ಬಸ್‌ಗಳ ಬ್ಯಾಟರಿಯಿಂದ ಹೊಗೆ ಉಗುಳುವ ಸಣ್ಣಪುಟ್ಟ ಘಟನೆಗಳು ನಡೆದಿದ್ದವು. ಬೆಂಕಿಯಲ್ಲಿ ಇಡೀ ವಾಹನ ಸುಟ್ಟು ಕರಕಲಾಗಿರುವುದು ಇದೇ ಮೊದಲು ಎಂದು ಅಧಿಕಾರಿ ತಿಳಿಸಿದ್ದಾರೆ.
BMTC ಪ್ರಸ್ತುತ ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಸಂಪೂರ್ಣ ತನಿಖೆ ನಡೆಸುತ್ತಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಸುಧಾರಿಸಲು ಜೆಬಿಎಂ ಕಂಪನಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ತಿಳಿಸುವಂತೆ ಬಿಎಂಟಿಸಿ ಪ್ರಯಾಣಿಕರಿಗೆ ಸಲಹೆ ನೀಡಿದೆ. ನಿಗಮವು ಸರಿಸುಮಾರು 400 ಎಲೆಕ್ಟ್ರಿಕ್ ಬಸ್‌ಗಳನ್ನು ಮೂರು ವಿಭಿನ್ನ ಕಂಪನಿಗಳಿಂದ ಗುತ್ತಿಗೆ ಪಡೆದಿದೆ. ಅವುಗಳಲ್ಲಿ ಹೆಚ್ಚಿನವು FAME-2 ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.