Mid-day Meal | ವಾರದ ಆರು ದಿನ ಮೊಟ್ಟೆ; ಬಿಸಿಯೂಟದತ್ತ ಹೆಚ್ಚಿದ ಮಕ್ಕಳ ಆಸಕ್ತಿ
Midday Meal: ಶಿಕ್ಷಣ ಇಲಾಖೆಯು ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ಸಹಯೋಗದೊಂದಿಗೆ ವಾರದ ಆರು ದಿನವೂ ಮೊಟ್ಟೆ ನೀಡಲಾಗುತ್ತಿದೆ.;
ವಾರಕ್ಕೆ ಆರು ದಿನಗಳು ಮೊಟ್ಟೆ ನೀಡಲು ಆರಂಭಿಸಿದ ನಂತರ ಮಧ್ಯಾಹ್ನದ ಬಿಸಿಯೂಟ ಸೇವಿಸುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಮೊಟ್ಟೆ ವಿತರಣೆ ಯೋಜನೆ ಮಕ್ಕಳ ಹಾಜರಾತಿಯನ್ನಷ್ಟೇ ಅಲ್ಲದೆ, ಮಧ್ಯಾಹ್ನದ ಬಿಸಿಯೂಟ ಸೇವಿಸುವ ಮಕ್ಕಳ ಪ್ರಮಾಣದಲ್ಲಿಯೂ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ವಾರಕ್ಕೆ ಆರು ದಿನಗಳು ಮೊಟ್ಟೆ ನೀಡಲು ಆರಂಭಿಸಿದ ನಂತರ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸುವ ಮಕ್ಕಳ ಸಂಖ್ಯೆಯಲ್ಲಿ ಶೇ.5.31ರಷ್ಟು ಹೆಚ್ಚಳವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಕೊಡುತ್ತಿದ್ದ ಮೊಟ್ಟೆ ಸೌಲಭ್ಯವನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿತ್ತು. ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ಸಹಯೋಗದೊಂದಿಗೆ ವಾರದ ಆರು ದಿನವೂ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದ್ದು, ಅಜೀಂ ಪ್ರೇಮ್‌ಜೀ ಪ್ರತಿಷ್ಠಾನ ಈ ಯೋಜನೆಗಾಗಿ ಬರೋಬ್ಬರಿ ₹1,500 ಕೋಟಿ ನೆರವು ನೀಡಿದೆ.
2024ರ ಸೆಪ್ಟೆಂಬರ್‌ನಿಂದ ಈ ಯೋಜನೆ ಆರಂಭಿಸಲಾಗಿದ್ದು, ವಾರದ ಆರು ದಿನ ಮೊಟ್ಟೆ ನೀಡಲಾಗುತ್ತಿದೆ. ಈ ಮೊದಲು ವಾರಕ್ಕೆ ಕೇವಲ ಎರಡು ದಿನ ಮಾತ್ರ ಮೊಟ್ಟೆ ವಿತರಿಸುವಾಗ ಬಿಸಿಯೂಟ ಯೋಜನೆ ವ್ಯಾಪ್ತಿಗೆ ಒಳಪಡುವ ರಾಜ್ಯದ 52.77 ಲಕ್ಷ ಮಕ್ಕಳಲ್ಲಿ ಶೇ.93.66ರಷ್ಟು ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದರು. ಈಗ, ಆರೂ ದಿನ ಮೊಟ್ಟೆ ವಿತರಣೆ ಮಾಡಲು ಆರಂಭಿಸಿದ ಬಳಿಕ ಶೇ.98.97ರಷ್ಟು ಮಕ್ಕಳು ಬಿಸಿಯೂಟಕ್ಕೆ ಹಾಜರಾಗುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ.
ಜಿಲ್ಲಾವಾರು ಮಾಹಿತಿ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಕ್ಕಳು (ಶೇ.84.16) ಮೊಟ್ಟೆ ಸೇವಿಸುತ್ತಿದ್ದಾರೆ. ಚಿಕ್ಕೋಡಿ ಜಿಲ್ಲೆಯಲ್ಲಿ ಕಡಿಮೆ ಮಕ್ಕಳು (ಶೇ.30.97) ಮೊಟ್ಟೆ ಸೇವಿಸುತ್ತಿದ್ದಾರೆ. ಆದರೆ, ಒಟ್ಟಾರೆಯಾಗಿ ನೋಡಿದಾಗ ರಾಜ್ಯದಲ್ಲಿ ಆರೂ ದಿನ ಮೊಟ್ಟೆ ವಿತರಿಸುತ್ತಿರುವುದರಿಂದ ಮಕ್ಕಳು ಬಿಸಿಯೂಟ ಮಾಡಲು ಆಸಕ್ತಿಯಿಂದ ಭಾಗವಹಿಸುತ್ತಿದ್ದು, ಬಹುತೇಕ ಶೇ.99ರಷ್ಟು ಮಕ್ಕಳು ಮೊಟ್ಟೆ ಸೇವಿಸುತ್ತಿದ್ದಾರೆ.
ಈ ಮುನ್ನ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಮುಂದಾದಾಗ ಲಿಂಗಾಯತ ಮಠಗಳು ಸೇರಿದಂತೆ ಕೆಲವು ಸ್ವಾಮೀಜಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದವು. ಮಕ್ಕಳು ಮೊಟ್ಟೆ ತಿನ್ನುವುದಿಲ್ಲ. ಮೊಟ್ಟೆ ತಿನ್ನುವುದು ತಮ್ಮ ಧರ್ಮಕ್ಕೆ ವಿರುದ್ಧವಾದುದರಿಂದ ಈ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದ್ದರು.
ಇದೀಗ ಅಂತಹ ನಂಬಿಕೆಗಳು ಬಹುತೇಕ ಹುಸಿ ಎಂಬುದನ್ನು ಈ ಅಂಕಿಅಂಶಗಳು ಸಾಬೀತು ಮಾಡಿವೆ.