Metro fare Hike: ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆ ವಿರೋಧಿಸಿ ನಾಗರಿಕರ ಸಮಾವೇಶ, ದರ ಇಳಿಸಲು ಹಕ್ಕೊತ್ತಾಯ

ಸಾರ್ವಜನಿಕ ಸಾರಿಗೆ ಸೇವೆಗಳು ಆದಾಯವನ್ನು ಗಳಿಸುವ ಬದಲು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಅಗತ್ಯ ಸೇವೆಯನ್ನು ಒದಗಿಸುವುದರ ಮೇಲೆ ಗಮನ ಹರಿಸಬೇಕು ಎಂದು ನಾಗರಿಕರು ಅಭಿಪ್ರಾಯಪಟ್ಟರು.;

Update: 2025-02-23 11:29 GMT

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಓಲಾ, ಉಬರ್‌ನಂಥಹ ವಾಣಿಜ್ಯ ಉದ್ದೇಶ ಹೊಂದಿರಬಾರದು. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಾರ್ವಜನಿಕ ಸೇವೆ ನೀಡುವುದೇ ಸರ್ಕಾರದ ಜವಾಬ್ದಾರಿ. ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತುಎಲ್ಲರಿಗೂ ಸಲ್ಲುವ ಸಾರಿಗೆ ವ್ಯವಸ್ಥೆಯ  ಸೃಷ್ಟಿ ಇಂದಿನ ಅಗತ್ಯ ಎಂದು ಬೆಂಗಳೂರಿನ ಐಐಎಸ್‌ಸಿಯ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್‌ ಪ್ರಾಧ್ಯಾಪಕ ಡಾ. ಆಶಿಶ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.  

ಭಾನುವಾರ ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್  ಹಾಲ್‌ನಲ್ಲಿ  'ಬೆಂಗಳೂರು ಉಳಿಸಿ ಸಮಿತಿ'ಯ ಸಂಯೋಜಿತ 'ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ'ದ ವತಿಯಿಂದ ಆಯೋಜಿಸಲಾಗಿದ್ದ ಮೆಟ್ರೋ ದರ ಏರಿಕೆ ವಿರೋಧಿ ನಾಗರಿಕ ಸಮಾವೇಶದಲ್ಲಿ ಅವರು ಮಾತನಾಡಿದರು. 

''ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ವಾಯು ಮಾಲಿನ್ಯ ನಿಯಂತ್ರಣ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿನ ಸುಧಾರಣೆಗಳಿಗೆ ಪೂರಕ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದಾಗುವ ಸಾಮಾಜಿಕ- ಆರ್ಥಿಕ ಪ್ರಯೋಜನಗಳು ದೊಡ್ಡ ಪ್ರಮಾಣದ್ದು. ಹೀಗಾಗಿ ಸಾರ್ವಜನಿಕ ಸಾರಿಗೆಗಳ ರಚನೆಯಿಂದಾಗುವ ಆರ್ಥಿಕ ಹೊರೆಯನ್ನು ಪ್ರಯಾಣಿಕರ ಹೆಗಲ ಮೇಲೆ ಹೊರಿಸಬಾರದು. ಕಾರ್ಯತಂತ್ರದ ನಿಧಿ ಮತ್ತು ಸಬ್ಸಿಡಿಗಳ ಮೂಲಕ ಸರ್ಕಾರವು ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು,'' ಎಂದು  ವರ್ಮಾ ಸಲಹೆ ನೀಡಿದರು.  

ಲಾಭಕ್ಕೆ ಆದ್ಯತೆ ನೀಡುವ ನಮ್ಮ ಮೆಟ್ರೋದ ಕ್ರಮವನ್ನು ಟೀಕಿಸಿದ ಅವರು, ''ಸಾರ್ವಜನಿಕ ಸಾರಿಗೆ ಸೇವೆಗಳು ಆದಾಯದ ಚಿಂತೆ ಬಿಟ್ಟು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವುದರ ಕಡೆಗೆ ಗಮನ ಹರಿಸಬೇಕು. ದರ ನಿಗದಿಪಡಿಸುವ ಕಾರ್ಯವಿಧಾನಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆಯುವುದು ಅಗತ್ಯ,'' ಎಂದು ಹೇಳಿದರು.  

ಮಾಲಿನ್ಯದಿಂದ ಉಸಿರಾಟದ ಸಮಸ್ಯೆ

ಕರ್ನಾಟಕ ವೈದ್ಯಕೀಯ ಸೇವಾ ಕೇಂದ್ರದ ಅಧ್ಯಕ್ಷೆ ಡಾ. ಸುಧಾ ಕಾಮತ್ ಅವರು ಮಾತನಾಡಿ, ''ಒಂದು ಕಾಲದಲ್ಲಿ ಬೆಂಗಳೂರು 'ಪಿಂಚಣಿದಾರರ ಸ್ವರ್ಗವಾಗಿತ್ತು. ಈಗ  ಸಂಚಾರ ದಟ್ಟಣೆ ಮತ್ತು ಮಾಲಿನ್ಯದಿಂದಾಗಿ ಹೆಚ್ಚಿನ ಜನರು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮೆಟ್ರೊ ಇದಕ್ಕೆ ಪರಿಹಾರವಾಗಿದೆ.  ಆರೋಗ್ಯ ಕ್ಷೇತ್ರದಂತೆಯೇ ಸಾರ್ವಜನಿಕ ಸಾರಿಗೆಯ "ಕಾರ್ಪೊರೇಟೀಕರಣ" ಸರಿಯಲ್ಲ. ಜನರು ತೆರಿಗೆಗಳು ಮತ್ತು ಸೆಸ್‌ಗಳ ಮೂಲಕ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ  ಸರ್ಕಾರಗಳ ಹೊಣೆಗಾರಿಕೆಯನ್ನು  ಪ್ರದರ್ಶಿಸಬೇಕು,'' ಎಂದು ಹೇಳಿದರು.  

ಮೆಟ್ರೋ ವ್ಯವಸ್ಥೆ ಅಗತ್ಯವಿದೆ

ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ. ಮೇಘನಾ ವರ್ಮಾ, ಮಹಿಳೆಯರು ಮತ್ತು ಅಂಗವಿಕಲರಿಗೆ ಸುಲಭವಾಗಿ ಲಭ್ಯವಾಗುವ  ಸಾರ್ವಜನಿಕ ಸಾರಿಗೆಯಾಗಿರುವ ಮೆಟ್ರೊದ  ಮಹತ್ವವನ್ನುಒತ್ತಿ ಹೇಳಿದರು.  ದರ ಏರಿಕೆ ಈ ಸಮುದಾಯಕ್ಕೆ ಹಾನಿ ಮಾಡುತ್ತದೆ.  ಬೆಂಗಳೂರಿನಂತಹ ಪ್ರಗತಿಪರ ನಗರಕ್ಕೆ ಕ್ರಿಯಾತ್ಮಕ ಮತ್ತು ಕೈಗೆಟುಕುವ ಮೆಟ್ರೋ ವ್ಯವಸ್ಥೆ ಅಗತ್ಯವಿದೆ.  ಸರ್ಕಾರವು ಜನ ಕೇಂದ್ರಿತ ವಿಧಾನ ಅಳವಡಿಸಿಕೊಳ್ಳಬೇಕು ಎಂದರು. 

ಬೆಂಗಳೂರು ರಕ್ಷಿಸಿ ಸಮಿತಿಯ ಸದಸ್ಯ ವಿ ಎನ್ ರಾಜಶೇಖರ್ ಅವರು ಮಾತನಾಡಿ ಸಾಲಗಳನ್ನು ಮರುಪಾವತಿಸುವ ಮತ್ತು  ಕಾರ್ಯಾಚರಣೆಯ ವೆಚ್ಚ ಸರಿದೂಗಿಸುವುದಕ್ಕಾಗಿ ಮೆಟ್ರೊ ಪ್ರಯಾಣ ದರ ಹೆಚ್ಚಿಸಲಾಗಿದೆ ಎಂದು ವಾದ ಮಾಡಲಾಗುತ್ತಿದೆ.  ದಿನಕ್ಕೆ ₹3 ಕೋಟಿ (ವಾರ್ಷಿಕವಾಗಿ ₹1,080 ಕೋಟಿ) ಗಳಿಸುವ ಗುರಿ ಹೊಂದಿದೆ ಎಂದು ಹೇಳುತ್ತಿದೆ.  2029-30 ರ ವೇಳೆಗೆ ಇದು ದಿನಕ್ಕೆ ₹7.6 ಕೋಟಿ (ವಾರ್ಷಿಕವಾಗಿ ₹2,776.58 ಕೋಟಿ) ಕ್ಕೆ ಹೆಚ್ಚಾಗುತ್ತದೆ. ಹಾಗಾದರೆ ಆ ವೇಳೆ ನಾಲ್ಕು ಪಟ್ಟು ದರ ಹೆಚ್ಚಿಸಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ಪೆಟ್ರೋಲ್, ಡೀಸೆಲ್ ಮತ್ತು ಆಸ್ತಿ ನೋಂದಣಿಯಿಂದ ಸಂಗ್ರಹವಾದ 'ಮೆಟ್ರೋ ಸೆಸ್' ಆದಾಯದ ಬಗ್ಗೆ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತರ ನೀಡಬೇಕು. ವಿದೇಶಿ ಹೂಡಿಕೆ ಒಪ್ಪಂದಗಳ ಷರತ್ತುಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳು ಮತ್ತು ಲಾಭ ನಿರ್ಣಯಿಸಲು ಸಿಎಜಿ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. 

10,000 ಕ್ಕೂ ಹೆಚ್ಚು ಸಹಿಗಳ ಸಂಗ್ರಹ

ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ, ನಗರಾದ್ಯಂತ ಸಹಿ ಅಭಿಯಾನ ಮಾಡಲಾಗಿದ್ದು, 10,000ಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ಮುಖ್ಯಮಂತ್ರಿ, ರಾಜ್ಯಪಾಲರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ   ಮನವಿ ಸಲ್ಲಿಸಲಾಗುವುದು. ಆ ಬಳಿಕ ಮುಂದಿನ ರೂಪುರೇಷೆಯ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಬಿಎಮ್‌ಸಿಎಯ ಪ್ರತಿನಿಧಿ ರಾಜೇಶ್ ಭಟ್ ಅವರು ತಿಳಿಸಿದರು. 

ಜೀವನದ ಗುಣಮಟ್ಟವು ಯಾವಾಗಲೂ ಉತ್ತಮವಾಗಿರುತ್ತದೆ 

ಸಭೆಯ ಬಳಿಕ ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಡಾ. ಆಶಿಶ್ ವರ್ಮಾ, ''ವಿಶ್ವಾದ್ಯಂತದ ನಗರಗಳನ್ನು ತೆಗೆದುಕೊಂಡರೆ ಮೆಟ್ರೋ ಮಾಡುವ ಕಲ್ಪನೆ ಪ್ರಾಯೋಗಿಕವಲ್ಲ. ಸಾರ್ವಜನಿಕ ಸೇವೆಯನ್ನು ವ್ಯಾಪಾರ ಆಧಾರಿತವಾಗಿ ನಡೆಸಲು ಸಾಧ್ಯವಿಲ್ಲ. ಕೆಲವು ಶ್ರೀಮಂತ ರಾಷ್ಟ್ರಗಳು ಅಥವಾ ನಗರಗಳು ತಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಸಬ್ಸಿಡಿ ನೀಡುವುದರಿಂದ ಹೆಚ್ಚಿನ ಜನರು ಅವುಗಳನ್ನು ಬಳಸುವಂತೆ ಮಾಡುತ್ತವೆ. ಇದರಿಂದ ಜೀವನ ಮಟ್ಟ ಸುಧಾರಣೆಯಾಗುತ್ತದೆ,'' ಎಂದು ಅವರು ತಿಳಿಸಿದರು. 

ʻಒನ್‌ ನೇಶನ್‌ ಒನ್‌ ಪ್ರೈಸ್‌ʼಗೆ ಬೇಡಿಕೆ 

ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಹಿರಿಯ ಎಂಜಿನಿಯರ್‌ ಹಾಗೂ ಮೆಟ್ರೋ ಪ್ರಯಾಣಿಕ ಜಯಂತ್‌ ಸಿಲೀನ್‌ ''ನನ್ನ ಕೆಲಸಲ್ಲಕಾಗಿ ಪ್ರತಿ ದಿನ ಮೆಟ್ರೋ  ಪ್ರಯಾಣ ಮಾಡಬೇಕಾಗುತ್ತದೆ.  ಪ್ರಯಾಣದರ ಇದೀಗ ದುಪ್ಪಟ್ಟಾಗಿದೆ. ನಾನು ಮಟ್ರೋ ಸಿಬ್ಬಂದಿ ಬಳಿ ಮೆಟ್ರೊ ಕಾರ್ಡ್​ ಬಗ್ಗೆ  ವಿಚಾರಿಸಿದಾಗ  ʻಒನ್‌ ನೇಶನ್‌ ಒನ್‌ ಕಾರ್ಡ್‌ʼ ಎಂದು ಮಾಹಿತಿ ನೀಡಿದರು.  ಈ ಕಾರ್ಡ್‌ ಮೂಲಕ ದೇಶದ ಯಾವುದೇ ಮಟ್ರೋದಲ್ಲಿ ಪ್ರಯಾಣ ಮಾಡಬಹುದು ಎಂದರು. ಹಾಗಾದರೆ ಎಲ್ಲಾ ಮೆಟ್ರೋಗಳಲ್ಲಿ ಪ್ರಯಾಣ ಮಾಡಬಹುದಾದರೆ ʻಒನ್‌ ನೇಶನ್‌ ಒನ್‌ ಪ್ರೈಸ್‌ʼ ಯಾಕೆ ಮಾಡಬಾರದು,'' ಎಂದು ಪ್ರಶ್ನಿಸಿದರು.  

ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು.  ದರ ಪರಿಷ್ಕರಣೆ, ನೀತಿ ನಿರೂಪಣೆಯ ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಯಿತು.  ನಾಗರಿಕರು ತೀವ್ರ ಕಳವಳ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮುರಿಗೆಪ್ಪ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ  ದೀಪ್ತಿ ಮತ್ತು ವೈದ್ಯಕೀಯ ಸೇವಾ ಕೇಂದ್ರದ ಡಾ. ಗಂಗಾಧರ್ ಈ ಸಮಾವೇಶದಲ್ಲಿ ಮಾತನಾಡಿದರು. 

Tags:    

Similar News