ಬಿಜೆಪಿ ಮುಖಂಡರಿಂದ ಅವಹೇಳನ |ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರಿಗೆ ದೂರು
ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಛಲವಾದಿ ನಾರಾಯಣಸ್ವಾಮಿ ನೀಡಿರುವ ಅವಹೇಳನಕಾರಿ ಹೇಳಿಕೆ ಹಾಗೂ ಜಿಲ್ಲಾಧಿಕಾರಿ ಕುರಿತು ಎನ್.ರವಿಕುಮಾರ್ ನೀಡಿರುವ ಹೇಳಿಕೆ ವಿರುದ್ಧ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.;
ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಿದ್ದ ಸಚಿವ ಎನ್.ಎಸ್. ಬೋಸರಾಜು ಮಾತನಾಡಿದರು.
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಪಾಕಿಸ್ತಾನಿ ಎಂದು ನಿಂದಿಸಿರುವ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರ ನಿಯೋಗ ಗುರುವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ವಿಧಾನಪರಿಷತ್ ಆಡಳಿತ ಪಕ್ಷದ ನಾಯಕ ಎನ್.ಎಸ್. ಭೋಸರಾಜು, ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಿತು.
ಸಚಿವ ಎನ್. ಎಸ್.ಭೋಸರಾಜು ಮಾತನಾಡಿ, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರು ಬೀದಿಯಲ್ಲಿ ಸಂವಿಧಾನ ವಿರೋಧಿಯಾಗಿ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ. ʼʼಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼʼ ಎನ್ನುವ ಬಿಜೆಪಿ ಸದಸ್ಯರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆ ನೀಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಜಿಲ್ಲಾಧಿಕಾರಿ ಬಗ್ಗೆ ಹೇಳಿಕೆ ನೀಡಿರುವ ಎನ್. ರವಿಕುಮಾರ್ ವಿರುದ್ದವೂ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಮಾತನಾಡಿ, ಕಾಂಗ್ರೆಸ್ ವಿಧಾನ ಪರಿಷತ್ತಿನ ಸದಸ್ಯರ ನಿಯೋಗವು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೇವೆ. ಅವಹೇಳನಕಾರಿ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ಹಾಗೂ ಎನ್.ರವಿಕುಮಾರ್ ಅವರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯರಾದ ವಸಂತ್‌ಕುಮಾರ್, ಅನಿಲ್ ಕುಮಾರ್ ಎಂ.ಎಲ್., ಜಗದೇವ ಗುತ್ತೇದಾರ್, ಎಸ್.ರವಿ, ಡಿ.ಟಿ.ಶ್ರೀನಿವಾಸ್, ದಿನೇಶ್ ಗೂಳಿಗೌಡ್, ಚನ್ನರಾಜ್ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ಪುಟ್ಟಣ್ಣ, ನಸೀರ್ ಅಹ್ಮದ್, ಗೋವಿಂದರಾಜು, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ನಿಯೋಗದಲ್ಲಿ ಇದ್ದರು.