Karnataka Budget 2025| ಫೆ.6ರಿಂದ ಸಿಎಂ ಸಿದ್ದರಾಮಯ್ಯ ಬಜೆಟ್‌ ಪೂರ್ವಸಿದ್ಧತೆ ಸಭೆ

Karnataka budget 2025| ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 14 ರಂದು 2025-26 ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದು, ಇದು ಅವರ 16ನೇ ದಾಖಲೆಯ ಬಜೆಟ್‌ ಮಂಡನೆಯಾಗಲಿದೆ.;

Update: 2025-02-06 06:40 GMT
ಸಿದ್ದರಾಮಯ್ಯ

ಮಾರ್ಚ್‌ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದು, ಗುರುವಾರ ಬಜೆಟ್‌ ಪೂರ್ವ ಸಿದ್ಧತೆ ಕುರಿತ ಪೂರ್ವಸಿದ್ಧತಾ ಸಭೆಗಳಿಗೆ ಚಾಲನೆ ನೀಡಲಿದ್ದಾರೆ. 

ಒಟ್ಟು ಐದು ದಿನಗಳ ಕಾಲ ವಿವಿಧ ಇಲಾಖೆಗಳೊಂದಿಗೆ ಬಜೆಟ್‌ ಪೂರ್ವ ಸಿದ್ಧತೆ ಸಭೆ ನಡೆಸಲಿದ್ದಾರೆ. ಫೆ.6 ರಂದು ಗೃಹ ಇಲಾಖೆ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ, ಸಣ್ಣ ಕೈಗಾರಿಕೆ, ಇಂಧನ, ಲೋಕೋಪಯೋಗಿ, ಕಾರ್ಮಿಕ, ಶಿಕ್ಷಣ, ಆಹಾರ, ಸಹಕಾರ, ರೇಷ್ಮೆ ಹಾಗೂ ಪಶು ಸಂಗೋಪನೆ ಸೇರಿ 13 ಇಲಾಖೆಗಳ ಜತೆ ಮ್ಯಾರಥಾನ್‌ ಸಭೆಗಳನ್ನು ಹಮ್ಮಿಕೊಂಡಿದ್ದಾರೆ.

ಫೆ.7 ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆವರೆಗೆ, ಫೆ. 8 ರಂದು ಶನಿವಾರ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆವರೆಗೆ, ಫೆ.10 ರಂದು ಸೋಮವಾರ ಸಂಜೆ 4 ರಿಂದ ರಾತ್ರಿ 7.30 ವರೆಗೆ ಹಾಗೂ ಫೆ.14 ರಂದು ಸಂಜೆ 4 ರಿಂದ ಸಂಜೆ 6 ಗಂಟೆವರೆಗೆ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದಾರೆ.

ಎಲ್ಲಾ ಸಭೆಗಳಲ್ಲಿ ಉಪ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆ ಸಚಿವರು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ಪ್ರತಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಐದು ಮಂದಿ ಮೀರದಂತೆ ಭಾಗವಹಿಸಲು ಸೂಚನೆ ನೀಡಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 14 ರಂದು 2025-26 ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದು, ಇದು ಅವರ 16ನೇ ದಾಖಲೆಯ ಬಜೆಟ್‌ ಮಂಡನೆಯಾಗಿರಲಿದೆ. ಸಿದ್ದರಾಮಯ್ಯ ಅವರ 16ನೇ ಬಜೆಟ್‌ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Tags:    

Similar News