ಮೈಸೂರಿಗೆ ಬಂದವರು ಮೈಲಾರಿ ಹೋಟೆಲ್‌ಗೆ ಬಾರದಿರುವರೇ?
ಸಿಎಂ ಸಿದ್ದರಾಮಯ್ಯ ಶನಿವಾರ ಗುರುವಾರ ಮುಂಜಾನೆ ಬೆಂಗಾವಲು ಪಡೆಯನ್ನು ಬಿಟ್ಟು ಖಾಸಗಿ ವಾಹನದಲ್ಲಿ ಹೊರಗೆ ತೆರಳಿ ಅಚ್ಚರಿ ಮೂಡಿಸಿದರು. ಜನಸಾಮಾನ್ಯರಂತೆ ಅಲ್ಲೇ ಕುಳಿತು ಮಸಾಲೆ ದೋಸೆ ಸವಿದರು. ಯಾಕೆ ಮೈಲಾರಿ ಹೋಟೆಲ್ ಅವರಿಗಿಷ್ಟ?;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯ ಮೈಸೂರು ಪ್ರವಾಸದಲ್ಲಿ ಇದ್ದಾರೆ. ಶನಿವಾರ ಬೆಳಿಗ್ಗೆ ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ದೋಸೆ, ಇಡ್ಲಿಯನ್ನು ಸವಿದರು.
ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಬಾರಿ ಮೈಲಾರಿ ಹೋಟೆಲ್‌ಗೆ ಖುದ್ದು ಭೇಟಿ ನೀಡಿ ತಿಂಡಿ ಸವಿದಿದ್ದಾರೆ. ಈ ಹಿಂದೆಯೂ ಹೋಟೆಲ್ ಭೇಟಿ ನೀಡಿ ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕುತ್ತಾ, ಜತೆಯಲ್ಲಿ ಬಂದ ಸಚಿವರಿಗೆ, ಅಧಿಕಾರಿಗಳಿಗೆ ಹೋಟೆಲ್ ಊಟದ ರುಚಿಯನ್ನು ತೋರಿಸಿದ್ದಾರೆ. ಸಿದ್ದರಾಮಯ್ಯ ಗುರುವಾರ ಮುಂಜಾನೆ ಬೆಂಗಾವಲು ಪಡೆಯನ್ನು ಬಿಟ್ಟು ಖಾಸಗಿ ವಾಹನದಲ್ಲಿ ಹೊರಗೆ ತೆರಳಿ ಮೈಲಾರಿ ಹೋಟೆಲ್‌ನಲ್ಲಿ ಮಸಾಲಾ ದೋಸೆ ಸವಿದಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ,"ನಾನು ಇಲ್ಲಿ ಉಪಾಹಾರ ಸೇವಿಸಿ ಬಹಳ ದಿನಗಳಾಗಿವೆ. ಗುರುವಾರವೇ ಭೇಟಿ ನೀಡಲು ಯೋಜಿಸಿದ್ದೆ. ಹೋಟೆಲ್‌ಗಳಲ್ಲಿ ಇಂತಹ ಉಪಾಹಾರವನ್ನು ಆನಂದಿಸುವುದು ಅಪರೂಪದ ಸೌಭಾಗ್ಯ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಹಾಗಾದರೆ, ಸಿದ್ದರಾಮಯ್ಯ ಅವರಿಗ್ಯಾಕೆ ಈ ಹೋಟೆಲ್ ಮೇಲೆ ಹೆಚ್ಚು ಅಕ್ಕರೆ?
ಅವರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಪ್ರಕಾರ, ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ಅವರ ಕಾಲೇಜು ದಿನಗಳು ನೆನಪಾಗುತ್ತವೆ. " ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳೆಲ್ಲವೂ ಮೈಸೂರಿನ ಜೊತೆ ಬೆಸೆದುಕೊಂಡಿವೆ. ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ ಬದುಕು ಕೊಟ್ಟ ಊರು. ದೈಹಿಕವಾಗಿ ದೂರವಿದ್ದಾಗಲೂ ಮೈಸೂರಿನ ನೆನಪು ಮನಸ್ಸಿಗೆ ಸದಾ ಹತ್ತಿರವಾಗಿರುತ್ತದೆ. ಈ ಮಣ್ಣಿನ ಋಣ ಬಹಳ ದೊಡ್ಡದು, ಅದರೆದುರು ನಾವು ಸಣ್ಣವರು," ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಈ ಮೈಲಾರಿ ಹೋಟೆಲ್ ಅನ್ನು 1938 ರಲ್ಲಿ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನವೇ ಮೈಲಾರಸ್ವಾಮಿ ಮತ್ತು ಅವರ ಪತ್ನಿ ಸುಂದರಮ್ಮ ಅವರು ತಮ್ಮ ಮನೆಯಲ್ಲೇ ಆರಂಭಿಸಿದ್ದ ಹೋಟೆಲ್ ಇದು. ಇದೀಗ ಅವರ ಮೊಮ್ಮಗ ನಡೆಸುತ್ತಿದ್ದಾರೆ. ಇತ್ತೀಚಿನವರೆಗೂ 10X80 ಸಣ್ಣ ಹಳೆಯ ಕಟ್ಟಡದಲ್ಲಿ ಬಾಯಿಯಲ್ಲಿ ಇಟ್ಟರೆ ಈ ಕರಗುವ ರುಚಿಕರವಾದ ದೋಸೆಗಳನ್ನು ನೀಡುತ್ತಿದ್ದ ಈ ಹೋಟೆಲ್ ಈಗ ಬೆಳೆಯುತ್ತಿರುವ ಜನಸಂದಣಿಯನ್ನು ನಿಭಾಯಿಸಲು ಆಧುನಿಕ ಸೌಲಭ್ಯಗಳೊಂದಿಗೆ ಪಕ್ಕದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಸೇರಿದಂತೆ ಹಲವು ನಾಯಕ ವರೇಣ್ಯರು , ಹೆಚ್ಚೇಕೆ, ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ ಈ ಹೋಟೆಲ್‌ಗೆ ತೆರಳಿ ಸ್ವತ: ತಾವೇ ದೋಸೆ ತಯಾರಿಸಿ, ದೋಸೆ ಸವಿದು ಸಂತಸ ವ್ಯಕ್ತಪಡಿಸಿದ್ದರು.
ಹೋಟೆಲ್ ಮೈಲಾರಿ ಮೈಸೂರಿನವರಿಗೆ ನಿಯಮಿತವಾಗಿ ಭೇಟಿ ನೀಡುವ ಸ್ಥಳವಾಗಿದೆ, ಪ್ರವಾಸಿಗರು, ವಿಶೇಷವಾಗಿ ವಿದೇಶಿಗರು ಮತ್ತು ಮೈಸೂರಿಗೆ ಭೇಟಿ ನೀಡುವ ಅನೇಕ ಸೆಲೆಬ್ರಿಟಿಗಳು ಸಹ ಈ ಹೋಟೆಲ್‌ಗೆ ಭೇಟಿ ನೀಡಿ ಇಲ್ಲಿ ಕನಿಷ್ಠ ಎರಡು ದೋಸೆಗಳನ್ನು ಸವಿಯುವುದನ್ನು ತಮ್ಮ ಪ್ರಯಾಣದ ಭಾಗವಾಗಿಸಿಕೊಳ್ಳುತ್ತಾರೆ. ಹೋಟೆಲ್ ಮೂಲಗಳ ಪ್ರಕಾರ ದಿನಕ್ಕೆ 1000 ಕ್ಕೂ ಹೆಚ್ಚು ದೋಸೆಗಳನ್ನು ಗ್ರಾಹಕರು ಸವಿಯುತ್ತಾರೆ.
ಮೈಸೂರಿಗೆ ಬಂದವರು ಮೈಲಾರಿ ಹೋಟೆಲ್‌ಗೆ ಬಾರದಿರುತ್ತಾರೆಯೇ?
ಹೋಟೆಲ್ ಮೈಲಾರಿಯಲ್ಲಿ ದೋಸೆ ತಿನ್ನದೇ ಮೈಸೂರಿಗೆ ಬಂದವರು ವಾಪಸ್ ಹೋಗೋದೇ ಇಲ್ಲ. ಅಷ್ಟು ಫೇಮಸ್ ಈ ಹೋಟೆಲ್. ಮೈಸೂರಿನ ನಜರಾಬಾದ್ ರಸ್ತೆಯ ಬಳಿ ಈ ಹೋಟೆಲ್ ಇದೆ.
ಹೋಟೆಲ್ ಮೈಲಾರಿಯಲ್ಲಿ ದೋಸೆ ಸವಿಯಲು ಜನರು ಕ್ಯೂ ನಿಂತಿರುತ್ತಾರೆ. ಬೆಳಗ್ಗೆ ಸುಮಾರು 7 ರಿಂದ ಮಧ್ಯಾಹ್ನ 11ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8:30ರವರೆಗೆ ಹೋಟೆಲ್ ಮೈಲಾರಿ ತೆರೆದಿರುತ್ತದೆ.
ಇದೇ ಮೈಲಾರಿ ಹೋಟೆಲ್‌ನಲ್ಲಿ ಪ್ರಿಯಾಂಕಾ ಗಾಂಧಿ ದೋಸೆ ಹುಯ್ದು ಸುದ್ದಿಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ತಿಂಡಿ ತಿನಿಸುಗಳ ವಿಷಯದಲ್ಲಿ ಮೈಸೂರಿನ - ಮೈಲಾರಿ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದ ಎಲೆ, ಮೈಸೂರು ರೇಷ್ಮೆ ಮತ್ತು ಗಂಧದ ಎಣ್ಣೆ, ಸೋಪು ಪ್ರಸಿದ್ಧಿ. ಹಾಗಾಗಿ ಮೈಲಾರಿ ಹೋಟೆಲಿನ ಮಸಾಲೆ ದೋಸೆ ಸವಿಯಲು ಬರುವ ಗಣ್ಯರಿಂದ ಮೈಸೂರಿನ ಅತ್ಯಂತ ಹಳೆಯ ಹೋಟೆಲ್ ಮೈಲಾರಿ ಮತ್ತೆ ಮತ್ತೆ ಸುದ್ದಿಗೆ ಬರುತ್ತಲೇ ಇದೆ.