UG CET Result | ಸಿಇಟಿ ಫಲಿತಾಂಶ ಪ್ರಕಟ ; 2.75 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ
ಯುಜಿ ಸಿಇಟಿ ಪರೀಕ್ಷೆಗೆ ಕುಳಿತಿದ್ದ 3.11 ಲಕ್ಷ ವಿದ್ಯಾರ್ಥಿಗಳಲ್ಲಿ 2.75 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಲೈವ್ ವೀಕ್ಷಣೆ ಮಾಡಲಾಗಿತ್ತು. ಪ್ರಸ್ತುತ, ವಿದ್ಯಾರ್ಥಿಗಳ 11.67 ಲಕ್ಷ ಓಎಂಆರ್ ಶೀಟ್‌ಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.;
ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಫಲಿತಾಂಶ ಪ್ರಕಟಿಸಿದರು.
ಯುಜಿ ಸಿಇಟಿ- 2025 ರ ಫಲಿತಾಂಶ ಶನಿವಾರ (ಮೇ 24) ಪ್ರಕಟವಾಗಿದೆ. ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 3.30 ಲಕ್ಷ ವಿದ್ಯಾರ್ಥಿಗಳ ಪೈಕಿ 3.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 2,75,677 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯುಜಿ ಸಿಇಟಿ ಪರೀಕ್ಷೆಯನ್ನು ಈ ಬಾರಿ ಹೆಚ್ಚು ಪಾರದರ್ಶಕತೆಯಿಂದ ಮಾಡಿದ್ದೆವು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ವೆಬ್ ಕಾಸ್ಟಿಂಗ್ ಮೂಲಕ ಯಾವುದೇ ಅಕ್ರಮ ನಡೆಯದಂತೆ ಒತ್ತು ನೀಡಿದ್ದೆವು. ವಿದ್ಯಾರ್ಥಿಗಳ ಫೇಸ್ ರಿಕಗ್ನಿಷನ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿತ್ತು. ಸಿಇಟಿ ಉತ್ತರ ಪತ್ರಿಕೆಗಳಲ್ಲಿ ಪಾರದರ್ಶಕತೆ ಕಾಯ್ತುಕೊಳ್ಳಲು 11.67 ಲಕ್ಷ ಓಎಂಆರ್ ಶೀಟ್‌ಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದೆವು ಎಂದು ಅವರು ಹೇಳಿದರು.
ಸಿಇಟಿ ವಿವಿಧ ವಿಭಾಗಗಳ ಅಗ್ರ ಶ್ರೇಯಾಂಕಿತರ ವಿವರ
ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿಯ ಚೈತ್ಯನ್ಯ ಸಿಬಿಎಸ್ಇ ಶಾಲೆಯ ಭವೇಶ್ ಜಯಂತಿ ಮೊದಲ ಸ್ಥಾನ(Rank ) ಪಡೆದರೆ, ಕನಕಪುರ ರಸ್ತೆ ಉತ್ತರಹಳ್ಳಿಯ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ ಎರಡನೇ ಸ್ಥಾನ ಹಾಗೂ ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ಸ್ಥಾನ ಗಳಿಸಿದ್ದಾರೆ.
ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ.ಪ್ರಥಮ ಸ್ಥಾನ, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಸ್ಥಾನ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ಸ್ಥಾನ ಗಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ನರ್ಸಿಂಗ್ ವಿಭಾಗದಲ್ಲಿ ಯಲಹಂಕ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ, ಹೆಚ್ಎಸ್ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ಸ್ಥಾನ ಹಾಗೂ ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ಸ್ಥಾನ ಗಳಿಸಿದ್ದಾರೆ.
ಪಶು ವೈದ್ಯಕೀಯ ವಿಭಾಗದಲ್ಲಿ ಯಲಹಂಕದ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ಸ್ಥಾನ, ಹೆಚ್ಎಸ್ಆರ್ ಲೇಔಟ್ನ ಆತ್ರೇಯ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ಹಾಗೂ ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ಸ್ಥಾನ ಗಳಿಸಿದ್ದಾರೆ.
ಡಿ-ಫಾರ್ಮ ವಿಭಾಗದಲ್ಲಿ ಆತ್ರೆಯಾ ವೆಂಕಟಚಲಂ ಪ್ರಥಮ, ಭವೇಶ್ ಜಯಂತಿ ದ್ವಿತೀಯ ಸ್ಥಾನ ಹಾಗೂ ಹರೀಶ್ ರಾಜ್ ತೃತೀಯ ಸ್ಥಾನ ಗಳಿಸಿದ್ದಾರೆ. ಬಿ-ಫಾರ್ಮ ವಿಭಾಗದಲ್ಲಿ ಆತ್ರೆಯಾ ವೆಂಕಟಚಲಂ ಪ್ರಥಮ, ಭವೇಶ್ ಜಯಂತಿ ದ್ವಿತೀಯ ಹಾಗೂ ಹರೀಶ್ ರಾಜ್ .ಡಿ.ವಿ ತೃತೀಯ ಸ್ಥಾನ ಪಡೆದಿದ್ದಾರೆ.
ಪಶುವೈದ್ಯಕೀಯ ವಿಭಾಗದಲ್ಲಿ ರಕ್ಷಿತಾ.ವಿ.ಪಿ. ಪ್ರಥಮ, ನಂದನ್ ದ್ವಿತೀಯ ಹಾಗೂ ಭುವನೇಶ್ವರಿ ತೃತೀಯ ಸ್ಥಾನ ಪಡೆದಿದ್ದಾರೆ.
ಜನಿವಾರ ತೆಗೆಸಿದ್ದ ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದ ವಿದ್ಯಾರ್ಥಿಗೂ ನ್ಯಾಯ ಒದಗಿಸಿದ್ದೇವೆ. ಅಂದು ಆ ಘಟನೆ ಉದ್ದೇಶಪೂರ್ವಕವಾಗಿ ನಡೆದಿರಲಿಲ್ಲ. ಸಿಬ್ಬಂದಿಯ ಎಡವಟ್ಟಿನಿಂದ ಆಗಿತ್ತು. ಬೀದರ್ನ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ನ್ಯಾಯ ಒದಗಿಸಿದ್ದೇವೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ವಿದ್ಯಾರ್ಥಿ ಹಾಗೂ ಆತನ ಪೋಷಕರ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಪಡೆದು, ಅವರ ಅಭಿಪ್ರಾಯದ ಮೇರೆಗೆ ಸರಾಸರಿ ಅಂಕ ಹಂಚಿಕೆ ಮಾಡುವ ಮೂಲಕ ಉತ್ತಮ ಸ್ಥಾನ ನೀಡಲಾಗಿದೆ. ವಿದ್ಯಾರ್ಥಿಗೆ 2ಲಕ್ಷದ 6 ಸಾವಿರನೇ ಸ್ಥಾನ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.