SSLC Exams | ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರಕ್ಕೆ ನುಗ್ಗಿ ಸಿಸಿಟಿವಿ ಕ್ಯಾಮೆರಾ ನಾಶ
ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಪರೀಕ್ಷಾ ಕೇಂದ್ರಕ್ಕೆ ನುಗ್ಗಿ ಗೇಟ್, ಕೊಠಡಿ ಬಾಗಿಲು ಮುರಿದು, ಕೊಠಡಿಗಳಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತು ಎಸೆದಿದ್ದಾರೆ.;
ಸಿಸಿಟಿವಿಗಳನ್ನು ಹಾಳುಗೆಡವಿದ ಕಿಡಿಗೇಡಿಗಳು
ರಾಜ್ಯದಲ್ಲಿ ಇಂದಿನಿಂದ (ಮಾ.21) ರಿಂದ ಎಸ್ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ನಿಗದಿಯಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ ರಾಜ್ಯಾದ್ಯಂತ ಆರಂಭವಾಗಿದೆ/
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ತಯಾರಿ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಕಿಡಿಗೇಡಿಗಳು ಪರೀಕ್ಷಾ ಕೇಂದ್ರಕ್ಕೆ ನುಗ್ಗಿ ಗೇಟ್, ಕೊಠಡಿಗಳ ಬಾಗಿಲು ಮುರಿದು, ಕೊಠಡಿಗಳಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತು ಎಸೆದಿದ್ದಾರೆ. ಬೆಳಿಗ್ಗೆ ಶಿಕ್ಷಕರು ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ತಕ್ಷಣವೇ ಸಿಸಿ ಕ್ಯಾಮೆರಾಗಳನ್ನು ಮರು ಜೋಡಣೆ ಮಾಡಿದ್ದಾರೆ,
10 ಕೊಠಡಿಗಳಲ್ಲಿ 14 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ 6 ಕ್ಯಾಮೆರಾಗಳನ್ನು ಕಿತ್ತೆಸೆದಿದ್ದಾರೆ. ವಿಚಾರ ತಿಳಿದ ಪೊಲೀಸರು ಹಾಗೂ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ನಾಶಪಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹೊಸದಾಗಿ ಜೋಡಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಾಧಿಕ್ ಪಾಷಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.