NAAC Bribe Case | ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ
ಗಾಯತ್ರಿ ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದು, ಸೂಕ್ಷ್ಮ ಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿಯಾಗಿದ್ದಾರೆ;
ನ್ಯಾಕ್ (National Assessment and Accreditation Council-NAAC) ಮಾನ್ಯತೆ ನೀಡಲು ವಿಶ್ವವಿದ್ಯಾನಿಲಯಗಳಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಬಿಐ, ನ್ಯಾಕ್ ಸಮಿತಿಯ ಸದಸ್ಯೆಯಾದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅವರನ್ನು ಬಂಧಿಸಿದೆ.
ಗಾಯತ್ರಿ ಅವರು ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದು, ಸೂಕ್ಷ್ಮ ಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿಯಾಗಿದ್ದಾರೆ. ಅವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ನ್ಯಾಕ್) ಏಳು ಸದಸ್ಯರ ತಪಾಸಣಾ ತಂಡದ ಭಾಗವಾಗಿದ್ದರು.
ಯುಜಿಸಿಯ ನ್ಯಾಕ್ ಮಾನ್ಯತೆ ನೀಡಲು ವಿಶ್ವವಿದ್ಯಾನಿಲಯಗಳಿಂದ ಲಂಚ ಬೇಡಿಕೆ ಇಡುತ್ತಿದ್ದ ನ್ಯಾಕ್ ತಂಡ, ಭಾರೀ ಮೊತ್ತದ ನಗದು ಮತ್ತು ಇತರೆ ಆಮಿಷಗಳಿಗೆ ಬೇಡಿಕೆ ಇಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಅಕ್ರಮ ನಡೆದಿರುವುದು ತನಿಖೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಭಾನುವಾರ ನ್ಯಾಕ್ ತಂಡದ ಅಧ್ಯಕ್ಷರು ಸೇರಿದಂತೆ ಹಲವನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಗಳಲ್ಲಿ ತಪಾಸಣಾ ಸಮಿತಿಯ ಅಧ್ಯಕ್ಷರು ಮತ್ತು ಆರು ಸದಸ್ಯರು ಸೇರಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೊನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಫ್) ಉಪಕುಲಪತಿ ಮತ್ತು ಇನ್ನೂ ಇಬ್ಬರು ಕಾರ್ಯನಿರ್ವಾಹಕರನ್ನು ಕೂಡ ಬಂಧಿಸಲಾಗಿದೆ.
ಹಲವರ ವಿರುದ್ಧ ಎಫ್‌ಐಆರ್
ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಮತ್ತು ನ್ಯಾಕ್ ಪರಿಶೀಲನಾ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.
ಕೆಎಲ್‌ಇಎಫ್ ಅಧ್ಯಕ್ಷ ಕೊನೆರು ಸತ್ಯನಾರಾಯಣ, ಎನ್‌ಎಎಸಿ ಮಾಜಿ ಉಪ ಸಲಹೆಗಾರ ಎಲ್ ಮಂಜುನಾಥ ರಾವ್, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ನಿರ್ದೇಶಕ (ಐಕ್ಯೂಎಸಿ-ಎನ್‌ಎಎಸಿ) ಎಂ ಹನುಮಂತಪ್ಪ ಮತ್ತು ಎನ್‌ಎಎಸಿ ಸಲಹೆಗಾರ ಎಂ ಎಸ್ ಶ್ಯಾಮ್‌ಸುಂದರ್ ಅವರ ವಿರುದ್ಧ ಕೂಡ ಎಫ್‌ಐಆರ್ ದಾಖಲಾಗಿದೆ ಎಂದು ಸಿಬಿಐ ತಿಳಿಸಿದೆ.
ಕೆಎಲ್‌ಇಎಫ್ ಉಪಕುಲಪತಿ ಜಿ ಪಿ ಸಾರಧಿ ವರ್ಮಾ, ಕೆಎಲ್‌ಇಎಫ್ ಉಪಾಧ್ಯಕ್ಷ ಕೊನೆರು ರಾಜ ಹರೀನ್ ಮತ್ತು ಹೈದರಾಬಾದ್ ಕ್ಯಾಂಪಸ್‌ನ ಕೆಎಲ್ ವಿಶ್ವವಿದ್ಯಾಲಯದ ನಿರ್ದೇಶಕ ಎ ರಾಮಕೃಷ್ಣ ಅವರನ್ನು ಕೂಡ ಎ ಮಾನ್ಯತೆ ಪಡೆಯಲು ಎನ್‌ಎಎಸಿ ಪರಿಶೀಲನಾ ಸಮಿತಿಯ ಸದಸ್ಯರಿಗೆ ಲಂಚ ನೀಡಿದ ಆರೋಪದ ಮೇಲೆ ಬಂಧಿಸಿದೆ.
20 ಸ್ಥಳಗಳಲ್ಲಿ ತನಿಖಾ ಸಂಸ್ಥೆ ದಾಳಿ
ವಿಜಯವಾಡ, ಚೆನ್ನೈ, ಬೆಂಗಳೂರು, ಪಲಮು, ಸಂಬಲ್ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ವಿವಿಧ ನಗರಗಳಾದ್ಯಂತ 20 ಸ್ಥಳಗಳಲ್ಲಿ ತನಿಖಾ ಸಂಸ್ಥೆ ದಾಳಿ ನಡೆಸಿದೆ.
ಈ ದಾಳಿ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು 37 ಲಕ್ಷ ರೂ. ನಗದು, ಆರು ಲ್ಯಾಪ್‌ಟಾಪ್‌ಗಳು, ಒಂದು ಮೊಬೈಲ್ ಫೋನ್ ಮತ್ತು ಇತರ ಅಪರಾಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 14 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐ ಹೇಳಿದ್ದು, ಅಪರಾಧದ ಪೂರ್ಣ ವ್ಯಾಪ್ತಿಯನ್ನು ಬಹಿರಂಗಪಡಿಸಲು ಮತ್ತು ಭಾಗಿಯಾಗಿರುವ ಇತರರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದಿದೆ.