BSY POCSO Case | 'ಪೋಕ್ಸೋ' ಪ್ರಕರಣ: ಬಿಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು
ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಮಾಜಿ ಸಿ.ಎಂ ಯಡಿಯೂರಪ್ಪ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದ್ದು, ಪ್ರಕರಣ ರದ್ದತಿಗೆ ಮಾತ್ರ ಹೈಕೋರ್ಟ್ ನಿರಾಕರಿಸಿದೆ.;
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಶುಕ್ರವಾರ (ಫೆಬ್ರವರಿ 07) ಆದೇಶ ಹೊರಡಿಸಿದೆ.
ಹದಿನೇಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಲ್ಲಿದ್ದ ಮಾಜಿ ಸಿ.ಎಂ ಯಡಿಯೂರಪ್ಪ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ತಮ್ಮ ವಿರುದ್ಧದ ಈ ಪೋಕ್ಸೋ ಪ್ರಕರಣವನ್ನು ರದ್ದು ಮಾಡುವಂತೆ ಕೋರಿದ್ದ ಯಡಿಯೂರಪ್ಪ ಅವರ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದ್ದು, ಆ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿಗೆ ಭಾರೀ ಹಿನ್ನಡೆಯಾಗಿದೆ.
ಏನಿದು ಪೋಕ್ಸೋ ಪ್ರಕರಣ?
ಕಳೆದ 2024 ಮಾರ್ಚ್ 14ರ ರಾತ್ರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ಆಗಮಿಸಿದ್ದ ಮಹಿಳೆಯೊಬ್ಬರು ದೂರು ನೀಡಿದ್ದರು.
ತಮ್ಮ 17 ವರ್ಷದ ಮಗಳ ಮೇಲೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಫೆಬ್ರವರಿ 2ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯನ್ನು ತಮ್ಮ ಕೊಠಡಿಗೆ ಕರೆದೊಯ್ದು ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಆ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.