Namma Metro | ಕನ್ನಡ ಸಂಘಟನೆಗಳ ಒತ್ತಡಕ್ಕೆ ಮಣಿದ ಬಿಎಂಆರ್‌ಸಿಎಲ್: ಕನ್ನಡೇತರ ನೇಮಕಾತಿ ಅಧಿಸೂಚನೆ ವಾಪಸ್
ಬಿಎಂಆರ್‌ಸಿಎಲ್ ಮಾರ್ಚ್ 12 ರಂದು ಅನ್ಯ ಭಾಷಿಗರು ಅಥವಾ ಹೈದರಾಬಾದ್ ಹಾಗೂ ಚೆನೈ ಮೆಟ್ರೋದ ಗುತ್ತಿಗೆ ಚಾಲಕರನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಅಧಿಸೂಚನೆ ಹೊರಡಿಸಿತ್ತು.;
ನಮ್ಮ ಮೆಟ್ರೋ
ಬಿಎಂಆರ್‌ಸಿಎಲ್ ʻನಮ್ಮ ಮೆಟ್ರೋʼ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ 50 ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿತ್ತು.
ಆದರೆ ಈ ಹುದ್ದೆಗಳಿಗೆ ಕನ್ನಡಿಗರನ್ನು ಬಿಟ್ಟು ಬೇರೆ ಭಾಷಿಗರಿಗೆ ಅವಕಾಶ ನೀಡಲು ಮುಂದಾಗಿದ್ದ ಬಿಎಂಆರ್‌ಸಿಎಲ್ ಕ್ರಮವನ್ನು ಕನ್ನಡಿಗರು ಖಂಡಿಸಿದ್ದರು. ಈ ವಿರೋಧದ ಬೆನ್ನಲ್ಲೇ ಅಧಿಕಾರಿಗಳು ನೇಮಕಾತಿ ಅಧಿಸೂಚನೆ ಹಿಂಪಡೆದಿದ್ದಾರೆ.
ಬಿಎಂಆರ್‌ಸಿಎಲ್ ಮಾರ್ಚ್ 12 ರಂದು ಅನ್ಯ ಭಾಷಿಗರು ಅಥವಾ ಹೈದರಾಬಾದ್ ಹಾಗೂ ಚೆನೈ ಮೆಟ್ರೋದ ಗುತ್ತಿಗೆ ಚಾಲಕರನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಅಧಿಸೂಚನೆ ಹೊರಡಿಸಿತ್ತು. ಈ ಬಗ್ಗೆ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಬಿಎಂಆರ್‌ಸಿಎಲ್ ಅಧಿಸೂಚನೆ ವಾಪಸ್ ಪಡೆದಿದೆ.
ನೇಮಕಾತಿ ವಾಪಸ್ ಪಡೆದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ರೈಲು ಚಾಲಕರ ಹುದ್ದೆಯ ನೇಮಕಾತಿ ನಿಯಮವನ್ನು ಬದಲಾವಣೆ ಮಾಡಲು ಒಪ್ಪಿಗೆ ನೀಡಿದೆ. ಹಳೆಯ ನೇಮಕಾತಿ ನಿಯಮಗಳ ಅನ್ವಯ ಕನ್ನಡಿಗರು ಅರ್ಜಿ ಸಲ್ಲಿಕೆ ಮಾಡಲು ಆಗುವುದಿಲ್ಲ. ಹೊಸದಾಗಿ ಬಿಎಂಆರ್‌ಸಿಎಲ್ ನೇಮಕಾತಿಗೆ ಷರತ್ತುಗಳನ್ನು ಬದಲಾಯಿಸಿ ಕನ್ನಡಿಗರು ಅರ್ಜಿ ಸಲ್ಲಿಕೆ ಮಾಡಲು ಅನುಕೂಲ ಮಾಡಿಕೊಡಲಿದೆ ಎಂದು ತಿಳಿದುಬಂದಿದೆ.
ಹಿಂದಿನ ನಿಯಮ ಏನಿದೆ?
ಈ ಹಿಂದೆ ಬಿಎಂಆರ್‌ಸಿಎಲ್ ಚಾಲಕ ಹುದ್ದೆಗೆ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡುತ್ತಿತ್ತು. ಆದರೆ ಈ ಬಾರಿ ಆ ನಿಯಮವನ್ನೇ ಬದಲಿಸಿ ಅನುಭವಿಗಳಿಗೆ ಮಾತ್ರ ಪಡೆದಿರುವವರಿಗೆ ಅವಕಾಶ ನೀಡುವುದಾಗಿ ಪ್ರಕಟಿಸಿತ್ತು. ಇಂಜಿನಿಯರಿಂಗ್ ಟ್ರೇಡ್ ನಲ್ಲಿ ಡಿಪ್ಲೊಮಾ ಪದವಿ ಪಡೆದವರು, ಯಾವುದೇ ಮೆಟ್ರೋದಲ್ಲಿ ಚಾಲಕರಾಗಿ ಮೂರು ವರ್ಷ ಅನುಭವ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬೇಕು ಎಂದು ನೇಮಕಾತಿ ನಿಯಮ ತಿಳಿಸಿತ್ತು. ಬಿಎಂಆರ್‌ಸಿಎಲ್ ನಿಯಮದ ಅನ್ವಯ ಚೆನ್ನೈ ಮೆಟ್ರೋ, ಹೈದರಾಬಾದ್ ಮೆಟ್ರೋ, ದೆಹಲಿ ಮೆಟ್ರೋದಲ್ಲಿ ಕೆಲಸ ಮಾಡಿದವರು ಮಾತ್ರ ಅರ್ಜಿ ಹಾಕಲು ಅರ್ಹರಾಗಿದ್ದರು.
ಬಿಎಂಆರ್‌ಸಿಎಲ್ ಈ ನಿಯಮಕ್ಕೆ ಕನ್ನಡ ಪರ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು. ಕನ್ನಡಿಗರಿಗೆ ಅವಕಾಶ ನೀಡುವುದನ್ನು ಬಿಟ್ಟು, ಬಿಎಂಆರ್‌ಸಿಎಲ್ ಬೇರೆ ರಾಜ್ಯದವರಿಗೆ ಉದ್ಯೋಗ ನೀಡಲು ಹೊರಟಿದೆ ಎಂದು ಆರೋಪಿದ್ದರು.
ಬಿಎಂಆರ್‌ಸಿಎಲ್ ಪತ್ರ ಬರೆದ ಪುರುಷೋತ್ತಮ ಬಿಳಿಮಲೆ
ಈ ವಿಚಾರವಾಗಿ ನಮ್ಮ ಮೆಟ್ರೋದಲ್ಲಿ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆ ಕೈಬಿಡಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಬಿಎಂಆರ್‌ಸಿಎಲ್ ಎಂಡಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರುವ ವಿಷಯವು ಕನ್ನಡಿಗರಿಗೆ ವೇದನೆಯನ್ನು ತರುವ ಸಂಗತಿಯಾಗಿದೆ. ಇವು ಕೇವಲ ತಾತ್ಕಲಿಕ ಹುದ್ದೆಗಳೆಂದು ನಿಮ್ಮ ಸಂಸ್ಥೆಯು ನೀಡಿರುವ ಸಮಜಾಯಿಷಿ ಕನ್ನಡಿಗರ ವೇದನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕರ್ನಾಟಕದ ಸಂಸ್ಥೆಯೊಂದು ಅನ್ಯ ಭಾಷಿಕರಿಗೆ ನೀಡುವ ಈ ರೀತಿಯ ಆಹ್ವಾನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡಿಗರ ಆತ್ಮಸ್ಥೆರ್ಯವನ್ನು ಕಸಿಯುವುದಷ್ಟೇ ಅಲ್ಲ, ಇದು ಸಾಂವಿಧಾನಿಕ ಆಶಯಗಳ ಸಂಪೂರ್ಣ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.
ನೇಮಕಾತಿ ನಿಯಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆಯನ್ನು ಉಲ್ಲೇಖಿಸಿದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ತಾಂತ್ರಿಕ ಹುದ್ದೆಯ ನೆಪವೊಡ್ಡಿ ಕನ್ನಡಿಗರನ್ನು ನೇಮಕಾತಿ ಪ್ರಕ್ರಿಯೆಯಿಂದ ದೂರವಿರಿಸುವುದು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲದ ಅಂಶ. ಅಂತೆಯೇ ನೇಮಕಗೊಂಡ ಕನ್ನಡೇತರರಿಗೆ ಆದ್ಯತೆ ಮೇರೆಗೆ ಕನ್ನಡವನ್ನು ಕಲಿಸಬೇಕಾದುದು ಸಹ ನಮ್ಮ ಮೆಟ್ರೋ ಸಂಸ್ಥೆಯ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.
ನಮ್ಮ ಮೆಟ್ರೋ ಸಂಸ್ಥೆ ಕೂಡಲೇ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ನೇಮಕಗೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಕಲಿಯದ ಕನ್ನಡೇತರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಬೇಕು. ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯ ಕುರಿತಂತೆ ಇಷ್ಟರಲ್ಲಿಯೇ ಭೇಟಿ ನೀಡ ಬಯಸುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.