Metro fare Hike : ಮೆಟ್ರೊ ದರ ಇಳಿಸದೇ ಹೋರಾಟ ನಿಲ್ಲಿಸುವುದಿಲ್ಲ; ಪ್ರಯಾಣಿಕರ ಸಂಘಟನೆ ಒತ್ತಾಯ

Metro fare Hike : ಮೆಟ್ರೋ ಪ್ರಯಾಣ ದರವನ್ನು ಕಡಿಮೆ ಮಾಡದಿದ್ದಲ್ಲಿ ತಮ್ಮ ಹೋರಾಟ ಮತ್ತಷ್ಟು ಉಲ್ಬಣವಾಗಲಿದೆ ಎಂದು ಎಚ್ಚರಿಸಿದೆ.;

Update: 2025-02-19 11:41 GMT
ನಮ್ಮ ಮೆಟ್ರೋ

ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಮಾಡಿರುವ ಬಿಎಂಆರ್‌ಸಿಎಲ್‌ನ ನಿರ್ಧಾರದಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ದರ ಏರಿಕೆಯನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ  'ಬೆಂಗಳೂರು ಉಳಿಸಿ ಸಮಿತಿ'(SBC) ಮೂಲಕ ಸಂಯೋಜನೆಗೊಂಡಿರುವ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ (BMCA) ಒತ್ತಾಯಿಸಿದೆ. 

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಮಿತಿ, ಮೆಟ್ರೋ ದರ ಏರಿಕೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಪರಸ್ಪರ ನಿಂದನೆಯಲ್ಲಿ ತೊಡಗಿವೆಯೇ ವಿನ: ಜನಪರ ಕಾಳಜಿ ತೋರಿಸಿಲ್ಲ. ದರ ನಿರ್ಧಾರಗಳ ಹಿಂದೆ ಇರುವ 'ದರ ನಿಗದಿ ಸಮಿತಿ' (Fare Fixation Committee)ಯ ಹೆಸರನ್ನು ಬಳಸಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಬಿಎಂಆರ್‌ಸಿಎಲ್ ಆಗಲಿ, ಕರ್ನಾಟಕ ರಾಜ್ಯ ಸರ್ಕಾರವಾಗಲಿ ಮತ್ತು ಕೇಂದ್ರ ಸರ್ಕಾರವಾಗಲಿ ಈ ಸಂಬಂಧ  ಜನರ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದೆ. ಮೆಟ್ರೋ ಪ್ರಯಾಣ ದರ ಕಡಿಮೆ ಮಾಡದಿದ್ದಲ್ಲಿ ತಮ್ಮ ಹೋರಾಟ ಮತ್ತಷ್ಟು ಉಲ್ಬಣವಾಗಲಿದೆ ಎಂದು ಎಚ್ಚರಿಸಿದೆ. 

ಪ್ರಯಾಣಿಕರ ಪ್ರಶ್ನೆಗಳೇನು?        

1. ಈ ಅಸಮಂಜಸ ದರ ಏರಿಕೆಯ ಹಿಂದಿರುವ ತರ್ಕವೇನು? ಬಿಎಂಆರ್‌ಸಿಎಲ್ 2023-24ರಲ್ಲಿ ರೂ.129.3 ಕೋಟಿ ಲಾಭಗಳಿಸಿತ್ತು. ಅದಕ್ಕೂ ಮುನ್ನ 2022-23ರಲ್ಲಿ ರೂ.108 ಕೋಟಿ ಲಾಭ ಕಂಡಿತ್ತು. 2025-26ರ ವೇಳೆಗೆ ಲಾಭವು ರೂ.200 ಕೋಟಿ ತಲುಪಲಿದೆ ಎಂಬ ನಿರೀಕ್ಷೆ ಇದೆ. ಆದರೂ ದರ ಏರಿಕೆ ಯಾಕೆ?

2. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಹೂಡಿಕೆ ಆಧಾರದಲ್ಲಿ ಮೆಟ್ರೋವನ್ನು ಜನಸಾಮಾನ್ಯರ ಬಳಕೆಗಾಗಿ ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಕಟ್ಟಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಜನಸಾಮಾನ್ಯರ ಕೈಗೆಟುಕುವ ಮಟ್ಟದಲ್ಲಿರಬೇಕು. ಮೆಟ್ರೋ ಯೋಜನೆ ಮಾಡಿರುವ ಇಡೀ ಖರ್ಚನ್ನು ಪ್ರಯಾಣ ದರದಿಂದಲೇ ವಸೂಲು ಮಾಡಬೇಕೆನ್ನುವುದು ಜನರ ಹಕ್ಕು ಕಸಿದುಕೊಂಡಂತೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡು ಇಡೀ ಯೋಜನೆಯ ಭಾರವನ್ನು ಜನರ ಹೆಗಲಿಗೆ ವರ್ಗಾಯಿಸುವುದು ಅಕ್ಷಮ್ಯವಲ್ಲವೇ? 

4. ಯೋಜನೆ ವಿಳಂಬ, ದರ ಏರಿಕೆ, ಬಡ್ಡಿಯ ಹೆಚ್ಚಳವನ್ನೂ ಜನರ ಮೇಲೆ ಹೊರಿಸಲಾಗಿದೆ. ಮೆಟ್ರೋ ನಿರ್ಮಾಣಕ್ಕೆ 1994ರಿಂದಲೇ 'ಸ್ಪೆಷಲ್ ಸಿಟಿ ಸೆಸ್' ವಿಧಿಸಿ ಕೋಟ್ಯಂತರ ರೂಪಾ ಸಂಗ್ರಹಿಸಲಾಗಿದೆ. ಪ್ರತಿ ಲೀಟರ್​ ಇಂಧನ ಖರೀದಿಯ ಮೇಲೆ ಹಾಗೂ ಪ್ರತಿಯೊಂದು ಆಸ್ತಿ ನೋಂದಣಿಯ ಮೇಲೆ ಬೆಂಗಳೂರಿಗರು ಈ ಸೆಸ್‌ನ್ನು ಪಾವತಿಸಿದ್ದಾರೆ. 2002-03ರ ವೇಳೆಗೆ ಅದರ ಪ್ರಮಾಣವು 403 ರೂ. ಕೋಟಿ ತಲುಪಿತ್ತು. ಅಂದರೆ, ಅದು ಈಗಿನ ಮೌಲ್ಯದಲ್ಲಿ1400-ರೂ.1600 ಕೋಟಿ ಆಗುತ್ತದೆ. ಈ ಹಣ ಹೇಗೆ ಬಳಕೆಯಾಯಿತು ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು.

4. ಬೆಂಗಳೂರು ಮೆಟ್ರೋ ಇತರ ನಗರಗಳಿಗಿಂತಲೂ ದುಬಾರಿ ಯಾಕೆ? ಕೋಲ್ಕತ್ತಾ ಮೆಟ್ರೋ ದೇಶದಲ್ಲಿ ಅತ್ಯಂತ ಕಡಿಮೆ ದರ ಹೊಂದಿದ್ದು, ದೆಹಲಿ ಮತ್ತು ಚೆನ್ನೈ ಮೆಟ್ರೋಗಳು ಪ್ರಯಾಣಿಕರಿಗೆ ಅನುಕೂಲಕರ ದರವಿದೆ. ಅವೆಲ್ಲವೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿವೆ ಮಾತ್ರವಲ್ಲ  ವಿಸ್ತರಿಸುತ್ತಲೂ ಇವೆ. ಬೆಂಗಳೂರು ಮೆಟ್ರೋ ಉದ್ಯಮದ ಮಾದರಿಯಲ್ಲೇ ಸಮಸ್ಯೆ ಇರುವಾಗ ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ವರ್ಗಾಯಿಸಿ ಸುಲಿಗೆ ಮಾಡುವುದು ಖಂಡನಾರ್ಹ.

5. ಪ್ರಯಾಣ ದರ ಹೆಚ್ಚಳದಿಂದ ಜನ ಮೆಟ್ರೋ ಬಿಟ್ಟು ಖಾಸಗಿ ವಾಹನಗಳಿಗೆ ಮರಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮತ್ತೆ ಸಂಚಾರ ದಟ್ಟಣೆ, ಮಾಲಿನ್ಯಗಳು ಹೆಚ್ಚುತ್ತವೆ.  ಇದು ಮೆಟ್ರೋ ನಿರ್ಮಾಣದ ಮೂಲತತ್ವಕ್ಕೇ  ವಿರುದ್ಧ. ಈ ಕುರಿತು ಸರ್ಕಾರಗಳ ಜವಾಬು ಏನು?

ದೆಹಲಿ ಮೆಟ್ರೋಗಳ ಮಾದರಿಯಲ್ಲಿ ಬೇರೆ ಮೂಲಗಳಿಂದ ಆದಾಯಗಳಿಸುವುದು ಮತ್ತು ಮೆಟ್ರೋ ದರವು ಎಸಿಯೇತರ ಬಸ್ ದರಕ್ಕಿಂತ ಗರಿಷ್ಠವೆಂದರೆ 1.5 ಪಟ್ಟು ಮಾತ್ರ ಹೆಚ್ಚು ಇರಬೇಕು ಎನ್ನುವ ಮೆಟ್ರೋಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಸಲಹೆ ಗಂಭೀರವಾಗಿ ಪರಿಗಣಿಸಬೇಕು. 

ಆನ್‌ಲೈನ್ ಆಗ್ರಹ ಪತ್ರದ ಮೂಲಕ ಸಾವಿರಾರು ಬೆಂಗಳೂರಿಗರ ಅಭಿಪ್ರಾಯ ಸಂಗ್ರಹಿಸಿದೆ. ಫೆಬ್ರವರಿ 18ರಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಹೋರಾಟದ ಮುಂದಿನ ರೂಪರೇಷೆಗಳನ್ನು ನಿರ್ಧರಿಸಲು ಫೆಬ್ರವರಿ 23ರಂದು ನಾಗರಿಕರ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

Tags:    

Similar News