ಬೆಂಗಳೂರು ಪೊಲೀಸ್ ಬಲೆಗೆ ಬಾಂಗ್ಲಾದೇಶ ಪ್ರಜೆ
ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಫಾರಿನರ್ಸ್ ಆಕ್ಟ್ ಹಾಗೂ BNS 336(3), 340(2), 339 ಅನ್ವಯ ಪ್ರಕರಣ ದಾಖಲಾಗಿದೆ.;
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರುನ ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆ ಮೊಹಮ್ಮದ್ ಸಿದ್ದಿಕ್ (55) ಅವರನ್ನು ಕಾಡುಗೋಡಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
2006ರಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಮೊಹಮ್ಮದ್ ಸಿದ್ದಿಕ್, ಪಶ್ಚಿಮ ಬಂಗಾಳದ ಮೆಲ್ಪಾ ಜಿಲ್ಲೆಯ ಶಾಲೆಯೊಂದರಲ್ಲಿ ನಕಲಿ ವರ್ಗಾವಣೆ ಪ್ರಮಾಣಪತ್ರ ಪಡೆದಿದ್ದನು. ಬಳಿಕ ಬೆಂಗಳೂರಿಗೆ ಬಂದು ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿ ವಾಸವಿದ್ದು, ನಕಲಿ ದಾಖಲೆಗಳ ಮೂಲಕ ಭಾರತದ ಪಾಸ್‌ಪೋರ್ಟ್, ವೋಟರ್ ಐಡಿ, ಪಾನ್ ಕಾರ್ಡ್ ಪಡೆದಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಫಾರಿನರ್ಸ್ ಆಕ್ಟ್ ಹಾಗೂ BNS 336(3), 340(2), 339 ಅನ್ವಯ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿರುವ ಬಾಂಗ್ಲಾದೇಶದ ವಲಸಿಗರಿಂದ ಹಣ ಪಡೆದು, ಭಾರತೀಯ ದಾಖಲೆಗಳಾದ ಪಾಸ್‌ಪೋರ್ಟ್, ಪಾನ್ ಕಾರ್ಡ್ ಮಾಡಿಸಿಕೊಡುವಲ್ಲಿ ಸಿದ್ಧಿಕ್ ಪ್ರಮುಖ ಪಾತ್ರವಹಿಸಿದ್ದನೆಂದು ತಿಳಿದುಬಂದಿದೆ. ಈತನೊಂದಿಗೆ ಇನ್ನೂ 15-20 ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಈತನ ವಿಚಾರಣೆ ವೇಳೆ ಬೆಂಗಳೂರು ಥಣಿಸಂದ್ರದ ವ್ಯಕ್ತಿಯೊಬ್ಬರು ಸಿದ್ದಿಕ್‌ಗೆ ಪಾನ್ ಕಾರ್ಡ್, ವೋಟರ್ ಐಡಿ ಮೊದಲಾದ ದಾಖಲೆಗಳನ್ನು ಹೊಂದಿಸಿಕೊಟ್ಟಿದ್ದು, ಶಾಲೆಯ ವರ್ಗಾವಣೆ ಪ್ರಮಾಣಪತ್ರದ ಆಧಾರದ ಮೇಲೆ ಏಜೆಂಟ್ ಮೂಲಕ ಪಾಸ್‌ಪೋರ್ಟ್ ಕೂಡ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ.