Booker Prize | ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಆಯ್ಕೆಪಟ್ಟಿಯಲ್ಲಿ ಬಾನು ಮುಷ್ತಾಖ್ ಅವರ ʼಹಾರ್ಟ್ ಲ್ಯಾಂಪ್ʼ
12 ಕಥೆಗಳನ್ನು ಒಳಗೊಂಡಿರುವ ಕಥಾ ಸಂಕಲನವನ್ನು 1990 ಮತ್ತು 2023 ರ ನಡುವೆ ಪ್ರಕಟಿಸಲಾಗಿದೆ.;
ಹಿರಿಯ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಷ್ತಾಖ್ ಅವರ ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' (ಮೂಲ ಕೃತಿ: ಹಸೀನಾ ಮತ್ತು ಇತರ ಕತೆಗಳು) 2025 ರ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪರಿಗಣಿಸಲು ಮಂಗಳವಾರ ಸಿದ್ಧವಾಗಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆ ಮೂಲಕ ಬಾನು ಮುಷ್ತಾಖ್ ಅವರು ಕನ್ನಡ ಸಾಹಿತ್ಯವನ್ನು ಜಾಗತಿಕ ಸಾಹಿತ್ಯ ವಲಯದಲ್ಲಿ ಮುನ್ನೆಲೆಗೆ ತಂದಿದ್ದಾರೆ.
ಬಾನು ಮುಷ್ತಾಖ್ ಅವರ ಕನ್ನಡ ಕಥಾ ಸಂಕಲನ ʼಹಸೀನಾ ಮತ್ತು ಇತರ ಕತೆಗಳುʼ ಕೃತಿಯನ್ನು ದೀಪಾ ಭಸ್ತಿ ಅವರು ಇಂಗ್ಲೀಷ್‌ಗೆ ಅನುವಾದಿಸಿದ್ದಾರೆ.
ಕೌಟುಂಬಿಕ ಹಾಗೂ ಸಮುದಾಯದ ತುಮುಲಗಳನ್ನು ಪ್ರಾದೇಶಿಕ ಸೊಗಡಿನೊಂದಿಗೆ, ವ್ಯಂಗ್ಯದ ಶೈಲಿಯಲ್ಲಿ ಈ ಕತೆಗಳು ಕಟ್ಟಿಕೊಟ್ಟಿವೆ ಎಂದು ತೀರ್ಪುಗಾರರು ವಿಶ್ಲೇಷಿಸಿದ್ದಾರೆ.
ಹದಿಮೂರು ಕೃತಿಗಳು ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿವೆ. 50 ಸಾವಿರ ಪೌಂಡ್ (₹55 ಲಕ್ಷಕ್ಕೂ ಹೆಚ್ಚು) ಮೊತ್ತದ ಬಹುಮಾನದ ಈ ಪ್ರಶಸ್ತಿಯ 'ಲಾಂಗ್ ಲಿಸ್ಟ್'ಗೆ ಇದೇ ಮೊದಲ ಬಾರಿಗೆ ಕನ್ನಡದಿಂದ ಅನುವಾದಗೊಂಡ ಕೃತಿ ಆಯ್ಕೆಯಾಗಿದೆ.
ಈ ಪಟ್ಟಿಯಲ್ಲಿನ ಹದಿಮೂರು ಕೃತಿಗಳಲ್ಲಿ ಆರು ಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲಿವೆ. ಅವುಗಳಲ್ಲಿ ಒಂದು ಕೃತಿ ಏಪ್ರಿಲ್ 8ರಂದು ಬಹುಮಾನಕ್ಕೆ ಆಯ್ಕೆಗೊಳ್ಳಲಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ಕ್ಷಣ! ಬಾನು ಮುಷ್ತಾಖ್ ಅವರ ಕನ್ನಡ ಸಣ್ಣ ಕಥಾ ಸಂಕಲನವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ನಿಜವಾದ ಗೌರವ! ಈ ಮನ್ನಣೆಯು ಕನ್ನಡ ಕಥನ ಪರಂಪರೆಗೆ ಜಾಗತಿಕ ಮೆಚ್ಚುಗೆಗೆ ದಾರಿ ಮಾಡಿಕೊಡುತ್ತದೆ. ಬಾನು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!" ಎಂದು ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾರ್ಟ್ ಲ್ಯಾಂಪ್ ಬಗ್ಗೆ ತೀರ್ಪುಗಾರರು ಹೇಳುವುದೇನು?
ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಬೂಕರ್ ಪುರಸ್ಕಾರಕ್ಕೆ ಪರಿಗಣಿಸಲಾಗಿರುವ 13 ಕೃತಿಗಳಲ್ಲಿ, ಬಾನು ಮುಷ್ತಾಖ್ ಅವರ ಕೃತಿಯು ಕುಟುಂಬ ಮತ್ತು ಸಮುದಾಯದ ಚಲನಶೀಲತೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಸೆರೆಹಿಡಿಯುವ "ಚಮತ್ಕಾರಿ, ಎದ್ದುಕಾಣುವ, ಆಡುಮಾತಿನ, ಹೃದಯಸ್ಪರ್ಶಿ ಮತ್ತು ರೋಮಾಂಚಕ" ನಿರೂಪಣಾ ಶೈಲಿಯನ್ನು ಹೊಂದಿದೆ. ಇದು ಮೊದಲ ಬಾರಿಗೆ ಕನ್ನಡದ ಕೃತಿಯೊಂದು ಜಾಗತಿಕ ಪ್ರತಿಷ್ಠಿತ ಬಹುಮಾನಕ್ಕಾಗಿ ಪಟ್ಟಿಮಾಡಲ್ಪಟ್ಟಿದೆ.
ದಕ್ಷಿಣ ಭಾರತದ ಮುಸ್ಲಿಂ ಸಮುದಾಯಗಳಲ್ಲಿ ನೆಲೆಗೊಂಡಿರುವ 12 ಕಥೆಗಳನ್ನು ಒಳಗೊಂಡಿರುವ ಈ ಸಂಗ್ರಹವನ್ನು ಮೂಲತಃ 1990ರಲ್ಲಿ ನಡುವೆ ಪ್ರಕಟಿಸಲಾಗಿದೆ. ಅಂಚಿನಲ್ಲಿರುವ ವ್ಯಕ್ತಿಗಳ ಜೀವನದ ಮೇಲೆ ಬೆಳಕು ಚೆಲ್ಲುವ ಭಾವನಾತ್ಮಕ ಮತ್ತು ನೈತಿಕವಾಗಿ ಭಾರವಾದ ಕಥಾ ನಿರೂಪಣೆ ಎಂದು ತೀರ್ಪುಗಾರರು ʼಹಾರ್ಟ್ ಲ್ಯಾಂಪ್ʼ ಕೃತಿಯನ್ನು ಶ್ಲಾಘಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಒಂದು ಪ್ರಮುಖ ಕ್ಷಣ
ಈ ಮನ್ನಣೆಯನ್ನು "ಕನ್ನಡ ಸಾಹಿತ್ಯಕ್ಕೆ ಸಿಕ್ಕ ಅಗಾಧ ಗೌರವ" ಎಂದು ಮುಷ್ತಾಖ್ ಬಣ್ಣಿಸಿದರೆ. "ತುಂಬಾ ರೋಮಾಂಚನಗೊಂಡಿದ್ದೇನೆ. ಇದು ಕೇವಲ ವೈಯಕ್ತಿಕ ಸಾಧನೆಯಲ್ಲ, ಕನ್ನಡ ಸಾಹಿತ್ಯಕ್ಕೆ ಒಂದು ಪ್ರಮುಖ ಕ್ಷಣ. ಗಂಡಾಳ್ವಿಕೆಯ ಒತ್ತಡದಲ್ಲಿ ದಕ್ಷಿಣ ಭಾರತದ ಮಹಿಳೆಯರ ದೈನಂದಿನ ಹೋರಾಟವನ್ನು ಕೃತಿ ಪ್ರತಿಧ್ವನಿಸಿವೆ ಮತ್ತು ಶೀಘ್ರದಲ್ಲೇ ಜಾಗತಿಕ ಓದುಗರನ್ನು ತಲುಪುತ್ತವೆ" ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.
2013 ರಲ್ಲಿ ಪ್ರಸಿದ್ಧ ಬರಹಗಾರ ಯು.ಆರ್. ಅನಂತಮೂರ್ತಿಯವರ ಕಾದಂಬರಿ ʻಸಂಸ್ಕಾರʼ ಮ್ಯಾನ್ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆ ವರ್ಷ ನಾಮನಿರ್ದೇಶನಗೊಂಡ 10 ಲೇಖಕರಲ್ಲಿ ಅನಂತಮೂರ್ತಿ ಕೂಡ ಒಬ್ಬರಾಗಿದ್ದರು. ಜೊತೆಗೆ ಮರ್ಲಿನ್ ರಾಬಿನ್ಸನ್, ಲಿಡಿಯಾ ಡೇವಿಸ್ ಮತ್ತು ಯಾನ್ ಲಿಯಾಂಕೆ ಅವರಂತಹ ಸಾಹಿತಿಗಳೂ ಇದ್ದರು. ಪ್ರಶಸ್ತಿ ಅಂತಿಮವಾಗಿ ಅಮೇರಿಕನ್ ಬರಹಗಾರ್ತಿ ಲಿಡಿಯಾ ಡೇವಿಸ್‌ಗೆ ಸಂದಿತ್ತು. ಆದರೆ ಅನಂತಮೂರ್ತಿಯವರ ನಾಮನಿರ್ದೇಶನವು ಜಾಗತಿಕ ವೇದಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಒಂದು ಹೆಗ್ಗುರುತಿನ ಕ್ಷಣವಾಗಿತ್ತು.