Bangalore Stampade: ರಾಜ್ಯ ಸರ್ಕಾರದ ವಿರುದ್ದ ಜೂ. 13ರಂದು ಬಿಜೆಪಿ ಬೃಹತ್‌ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು ಸೇರಿದಂತೆ ಸುಮಾರು 15 ರಿಂದ 20 ಸಾವಿರ ಪ್ರತಿಭಟನಾಕಾರರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.;

Update: 2025-06-10 11:33 GMT

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರ್ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ನೇರ ಹೊಣೆಯಾಗಿದ್ದು ಸರ್ಕಾರದ ವಿರುದ್ಧ ಶುಕ್ರವಾರ(ಜೂ.13) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಬಳಿ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಿದ್ದೇವೆ. ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು ಸೇರಿದಂತೆ ಸುಮಾರು 15 ರಿಂದ 20 ಸಾವಿರ ಪ್ರತಿಭಟನಾಕಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಪ್ರಕರಣದ ಮೊದಲ ಆರೋಪಿ ಸಿಎಂ ಸಿದ್ದರಾಮಯ್ಯ, ಎರಡನೇ ಆರೋಪಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮೂರನೇ ಆರೋಪಿಗಳು ಎಂದು ದೂರಿದ್ದಾರೆ.

ಕ್ಲೀನ್ ಚಿಟ್ ಪಡೆಯಲು ತನಿಖೆ

ಕರ್ತವ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಆದರೆ ಸರ್ಕಾರ ಸಿಐಡಿ ತನಿಖೆಗೆ ಕೊಟ್ಟಿದೆ. ಮತ್ತೊಂದೆಡೆ  ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಅವರಿಗೆ ಬೇಕಾದವರನ್ನು ನೇಮಿಸಿ ರಾಜ್ಯ ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಹೊಣೆಯಿಂದ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡಿದೆ ಎಂದು ಆರೋಪಿಸಿದರು.

ಸಿಎಂ, ಡಿಸಿಎಂ ನಡುವೆ ಪೈಪೋಟಿ

ಕಾರ್ಯಕ್ರಮದ ಯಶಸ್ಸು ಪಡೆಯಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಪೈಪೋಟಿ ಇತ್ತು. ತಮ್ಮ ಜನಪ್ರಿಯತೆಗಾಗಿ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜಿಸಿದ್ದರು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸಿಎಂ ಕಾರ್ಯಕ್ರಮ ಏರ್ಪಡಿಸಿದ್ದರು. ಅವರ ಗೊಂದಲದಿಂದ ಬಲಿ ಆದವರು ಯಾರು? ಯಾರ ಮರ್ಯಾದೆ ಹೋಗಿದೆ? ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲಿ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದರು.

ರಾಜ್ಯದ ಗೌರವ ಹಾಳು

ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಉಪಟಳ ತಡೆಯಲು ಸಾಧ್ಯವಾಗದೆ ಆರ್‌ಸಿಬಿ ಅಭಿಮಾನಿಗಳು ವಿಧಾನಸೌಧದ ಮೆಟ್ಟಿಲ ಬಳಿ ಚಪ್ಪಲಿ, ಕಲ್ಲು ತೂರಿದ್ದಾರೆ. ಅವರಿಗೆ ಸೆಲ್ಫಿ ಹಾಗೂ  ಜನಪ್ರಿಯತೆಯ ಚಟ. ಅದಕ್ಕಾಗಿ ರಾಜ್ಯದ ಗೌರವವನ್ನೂ ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.

ರಾಜ್ಯಪಾಲರನ್ನು ತಪ್ಪು ದಾರಿಗೆ ಎಳೆದು ಅವರನ್ನೂ ಸಭೆಯಲ್ಲಿ ಕೂರಿಸಿಕೊಂಡಿದ್ದರು. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಲು ನಾವು ಹೇಳಿದ್ದೇವಾ? ನಾವು ಮೆರವಣಿಗೆಗೆ ಅವಕಾಶ ಕೋರಿದ್ದೆವು. ಮೆರವಣಿಗೆ ಮಾಡಿದ್ದರೆ ದುರ್ಘಟನೆ ನಡೆಯುತ್ತಿರಲಿಲ್ಲ. ನಾವು ಅಭಿಮಾನಿಗಳ ಪರವಾಗಿ ಕರೆ ಕೊಟ್ಟಿದ್ದೇವೆ. ಆದರೆ ಸರಕಾರಕ್ಕೆ ಜವಾಬ್ದಾರಿ ಇಲ್ಲವೇ , ಕಾನೂನು, ಸುವ್ಯವಸ್ಥೆ ಸರಕಾರದ ಹೊಣೆಯಲ್ಲವೇ? ಎಂದರು.

ದಪ್ಪ ಚರ್ಮದ ಸರ್ಕಾರ

ನಾಡಿನ ಜನರ ಭಾವನೆಯನ್ನು ಮುಖ್ಯಮಂತ್ರಿಗೆ ತಿಳಿಸುವ ಉದ್ದೇಶದಿಂದ ಮಂಗಳವಾರ(ಜೂ.10) ಸಿಎಂಗೆ ಬಹಿರಂಗ ಪತ್ರ ಬರೆದಿದ್ದು, ನೊಂದ ಕುಟುಂಬಗಳ ಸದಸ್ಯರ ಭಾವನೆಯು ರಾಜ್ಯದ ಸಿಎಂ, ಡಿಸಿಎಂ ಹಾಗೂ ಸರಕಾರಕ್ಕೆ ಅರ್ಥ ಆಗಬೇಕು. ಪತ್ರ ನೋಡಿ ಮುಖ್ಯಮಂತ್ರಿಗಳು ಸ್ಪಂದಿಸುವ ವಿಶ್ವಾಸ ನನಗಿಲ್ಲ. ರಾಜ್ಯ ಸರಕಾರ ದಪ್ಪ ಚರ್ಮ ಹೊಂದಿದೆ ಎಂದು ವ್ಯಂಗ್ಯವಾಡಿದರು.

Tags:    

Similar News