Bangalore-Chennai Express Way | ಎರಡೂವರೆ ಗಂಟೆಯಲ್ಲೇ ಚೆನ್ನೈಗೆ! ಸಿಲಿಕಾನ್ ಸಿಟಿ ಆರ್ಥಿಕತೆಗೆ ಬೂಸ್ಟರ್
ʼಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇʼ ಯೋಜನೆಯ ಕರ್ನಾಟಕ ಭಾಗದ ಕಾಮಗಾರಿ (71 ಕಿ.ಮೀ) ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತಲುಪುವ 8 ಗಂಟೆ ಅವಧಿಯನ್ನು ಎರಡೂವರೆ ಗಂಟೆ ಇಳಿಸಲಿದ್ದು, ಉದ್ಯಮಿಗಳು ಹಾಗೂ ವೃತ್ತಿಪರರಿಗೆ ಅನುಕೂಲಕರವಾಗಲಿದೆ.;
ತಮಿಳುನಾಡು-ಕರ್ನಾಟಕದ ರಾಜಧಾನಿ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ʼಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇʼ- ಉಭಯ ರಾಜ್ಯಗಳ ಆರ್ಥಿಕ ಪ್ರಗತಿಗೆ ರಹದಾರಿಯಾಗಿ ಬದಲಾಗಲಿದೆ. ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಅವಧಿಯನ್ನು ಎರಡೂವರೆ ಗಂಟೆಗೆ ಇಳಿಸುವ ಜೊತೆಗೆ ವಾಣಿಜ್ಯ ವಹಿವಾಟಿಗೆ ಪೂರಕವಾಗಿ ನ್ಯಾಷನಲ್ ಎಕ್ಸ್‌ಪ್ರೆಸ್ ವೇ( ಎನ್‌ಇ-7) ಕಾರ್ಯ ನಿರ್ವಹಿಸಲಿದೆ.
ʼಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇʼ ಯೋಜನೆಯ ಕರ್ನಾಟಕ ಭಾಗದ ಕಾಮಗಾರಿ (71 ಕಿ.ಮೀ) ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತಲುಪುವ 8 ಗಂಟೆ ಅವಧಿಯನ್ನು ಎರಡೂವರೆ ಗಂಟೆ ಇಳಿಸಲಿದ್ದು, ಉದ್ಯಮಿಗಳು ಹಾಗೂ ವೃತ್ತಿಪರರಿಗೆ ಅನುಕೂಲಕರವಾಗಲಿದೆ.
ಬೆಂಗಳೂರಿನ ಹೊಸಕೋಟೆಯಿಂದ ಆರಂಭವಾಗುವ ʼಎಕ್ಸ್‌ಪ್ರೆಸ್ ವೇʼ ಮಾಲೂರು, ಬೇತಮಂಗಲದ ಮೂಲಕ ಸುಂದರಪಾಳ್ಯದಲ್ಲಿ ಆಂಧ್ರಪ್ರದೇಶ ಪ್ರವೇಶಿಸಲಿದೆ. ಅಲ್ಲಿಂದ ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬೂರಿನಲ್ಲಿ ಎಕ್ಸ್‌ಪ್ರೆಸ್ ವೇ ಕೊನೆಗೊಳ್ಳಲಿದೆ.
ಆರ್ಥಿಕತೆಗೆ ʼಎಕ್ಸ್‌ಪ್ರೆಸ್ ವೇʼ ಬೂಸ್ಟರ್
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣವು ಸಿಲಿಕಾನ್ ಸಿಟಿ ಬೆಂಗಳೂರಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಲಿದೆ. ಮಾಹಿತಿ ತಂತ್ರಜ್ಞಾನದ ತೊಟ್ಟಿಲಾಗಿರುವ ಐಟಿಪಿಎಲ್, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರದಿಂದ ಕಚ್ಛಾವಸ್ತುಗಳ ಆಮದು, ರಫ್ತು ಸುಲಭವಾಗಲಿದೆ. ಜೊತೆಗೆ ಉತ್ತಮ ಸಂಪರ್ಕ ವ್ಯವಸ್ಥೆ ತಲೆಎತ್ತಿರುವುದರಿಂದ ಬೃಹತ್ ಉದ್ಯಮಗಳು ʼಎಕ್ಸ್‌ಪ್ರೆಸ್ ವೇʼ ಎರಡೂ ಬದಿಗಳಲ್ಲಿ ನೆಲೆಯೂರುತ್ತಿವೆ. ಈಗಾಗಲೇ ಟಾಟಾ ಮೋಟರ್ಸ್, ಕಿಯಾ ಮೋಟರ್ಸ್, ಫಾಕ್ಸ್‌ಕಾನ್ ಸೇರಿದಂತೆ ಕೈಗಾರಿಕಾ ಪ್ರದೇಶಗಳು ಉದ್ಯಮ ಸ್ಥಾಪನೆ ಆರಂಭಿಸಿವೆ.
ಐಟಿ ಕಚ್ಛಾವಸ್ತುಗಳನ್ನು ಚೆನ್ನೈ ಬಂದರು ಮೂಲಕ ವಿದೇಶಗಳಿಗೆ ರಫ್ತು ಮಾಡಲು ಎಕ್ಸ್‌ಪ್ರೆಸ್ ಅನುಕೂಲಕರ ಮಾರ್ಗವಾಗಿ ಪರಿಣಮಿಸಿದೆ. ಚೆನ್ನೈನಲ್ಲಿ ಭಾರತದ ಎರಡನೇ ಅತಿದೊಡ್ಡ ಕಂಟೈನರ್ ಬಂದರು ಇದ್ದು,ಕಡಲ ವ್ಯಾಪಾರ ಹೆಚ್ಚಲಿದೆ.
"ಬೆಂಗಳೂರಿನಲ್ಲಿ ಉದ್ಯಮ ವ್ಯವಹಾರ ನಡೆಸುವವರು ತ್ವರಿತವಾಗಿ ಗಮ್ಯಸ್ಥಾನ ತಲುಬಹುದು. ಯಾವುದೇ ಅಡೆತಡೆ ಇಲ್ಲದ ಸಂಚಾರದಿಂದ ಚೆನ್ನೈ ಹಾಗೂ ಬೆಂಗಳೂರಿನ ಪ್ರಗತಿ ಸಾಧ್ಯವಾಗಲಿದೆ" ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ ವಿಭಾಗದ ಯೋಜನಾ ನಿರ್ದೇಶಕಿ ಅರ್ಚನಾ ಕುಮಾರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಎಕ್ಸ್‌ಪ್ರೆಸ್ ವೇಗೆ ಉಪನಗರ ಹೊರವರ್ತುಲ ರಸ್ತೆ(ಎಸ್‌ಟಿಆರ್‌ಆರ್) ನಿರ್ಮಿಸುವುದರಿಂದ ಸಂಪರ್ಕ ವ್ಯವಸ್ಥೆ ಸುಲಭವಾಗಲಿದೆ. ಬೆಂಗಳೂರಿನಿಂದ ವಾಹನ ದಟ್ಟಣೆ ಭೇದಿಸಿಕೊಂಡು ವಿಮಾನ ನಿಲ್ದಾಣ ತಲುಪಲು ಕನಿಷ್ಠ ಎರಡೂವರೆಯಿಂದ ಮೂರು ಗಂಟೆ ಬೇಕಾಗಬಹುದು. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಆಗಲು ಒಂದೂವರೆ ಗಂಟೆ ಮೊದಲೇ ಇರಬೇಕು. ಡಿಜಿ ಯಾತ್ರಾದ ಮೂಲಕ ಪ್ರವೇಶಿಸುವವರು ಕೂಡ ಒಂದು ತಾಸು ಮುಂಚಿತವಾಗಿಯೇ ಇರಬೇಕಾಗುತ್ತದೆ. ಆದರೆ, ಇಲ್ಲಿ ತೆಗೆದುಕೊಳ್ಳುವ ಸಮಯದಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಬಹುದಾಗಿದೆ" ಎಂದು ವಿವರಿಸಿದರು.
ಆಂಧ್ರ, ತಮಿಳುನಾಡಿನ ಕಾಮಗಾರಿ ಬಾಕಿ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಮಾರ್ಗದ ಕರ್ನಾಟಕ ಭಾಗದ ಕಾಮಗಾರಿ ಮುಗಿದಿದ್ದು, ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 288 ಕಿ.ಮೀ.ಉದ್ದದ ಹೆದ್ದಾರಿಯು ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರಪ್ರದೇಶದಲ್ಲಿ 72 ಕಿ.ಮೀ. ಹಾಗೂ ತಮಿಳುನಾಡಿನಲ್ಲಿ 145 ಕಿ.ಮೀ. ಹಾದು ಹೋಗಲಿದೆ.
ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದ ಕಾಮಗಾರಿ ಶೇ 60ರಷ್ಟು ಪೂರ್ಣಗೊಂಡಿದ್ದು, ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭದ ವೇಳೆ ಕಾರ್ಯಾಚರಣೆಗೆ ಒಡ್ಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ʼಎಕ್ಸ್‌ಪ್ರೆಸ್ ವೇʼ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಷ್ಠಾನಗೊಳಿಸಿದರೂ ಈ ರಸ್ತೆಗೆ ʼರಾಷ್ಟ್ರೀಯ ಎಕ್ಸ್ಪ್ರೆಸ್ ವೇʼ (ಎನ್ಇ-7) ಎಂದು ಹೆಸರಿಡಲಾಗಿದೆ. ಪ್ರಸ್ತುತ, ಇದು ಚತುಷ್ಪಥ ರಸ್ತೆಯಾಗಿದ್ದು, ಭವಿಷ್ಯದಲ್ಲಿ ಷಟ್ಪಥವಾಗಿ ವಿಸ್ತರಿಸಬಹುದಾದ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್ ವೇ ಆಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕದ ಭಾಗದಲ್ಲಿ ಹೊಸಕೋಟೆ, ಮಾಲೂರು, ಬಂಗಾರಪೇಟೆ ಬಳಿ ನಿರ್ಗಮನ ಹಾಗೂ ಪ್ರವೇಶ ವ್ಯವಸ್ಥೆ ಕಲ್ಪಿಸಲಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ನೋಟ
ಸರ್ವೀಸ್ ರಸ್ತೆ ಮುಕ್ತ ಎಕ್ಸ್‌ಪ್ರೆಸ್ ವೇ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ 120 ಕಿ.ಮೀ.ವೇಗದ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇಡೀ ಎಕ್ಸ್‌ಪ್ರೆಸ್ ವೇನಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಲ್ಲ. ಸರ್ವೀಸ್ ರಸ್ತೆ ನಿರ್ಮಿಸುವುದರಿಂದ ಎಕ್ಸ್‌ಪ್ರೆಸ್ ವೇ ಉದ್ದೇಶ ಈಡೇರುವುದಿಲ್ಲ. ಅಲ್ಲದೆ ಅಪಘಾತಗಳಿಗೂ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಲ್ಲ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕರ್ನಾಟಕ ಭಾಗದ ಅಧಿಕಾರಿಗಳು ಮಾತು.
ಎಕ್ಸ್‌ಪ್ರೆಸ್ ವೇ ಉದ್ದಕ್ಕೂ ಹೈಟೆಕ್ ಕ್ಯಾಮೆರಾ, ಸಂಚಾರ ನಿಯಮಗಳನ್ನು ತಿಳಿಸುವ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಎಕ್ಸ್‌ಪ್ರೆಸ್ ವೇಯನ್ನು ಅಂದಾಜು 17,930 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರತಿದಿನ 2000 ವಾಹನಗಳು ಕರ್ನಾಟಕ ಭಾಗದ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುತ್ತಿವೆ. ಹೊಸಕೋಟೆಯಿಂದ ಬೇತಮಂಗಲದವರೆಗಿನ 68 ಕಾಮಗಾರಿ ಮುಗಿದಿದ್ದು, ಉಳಿದ 3 ಕಿ.ಮೀ. ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಹೊಸಕೋಟೆ ಹಾಗೂ ಬೇತಮಂಗಲ ನಡುವೆ ಎಕ್ಸ್‌ಪ್ರೆಸ್ ವೇ ಮಾರ್ಗದಲ್ಲಿ ಸಂಚರಿಸುವವರು ಹಳ್ಳಿ ರಸ್ತೆಯ ಮೂಲಕ ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ಗಡಿ ತಲುಪುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕರ್ನಾಟಕ ವಿಭಾಗದ ಯೋಜನಾ ನಿರ್ದೇಶಕಿ ಅರ್ಚನಾ ಕುಮಾರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ಟೋಲ್ ಸಂಗ್ರಹ ಆರಂಭಿಸಲಾಗುವುದು. ಅಲ್ಲಿಯವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುವುದಿಲ್ಲ ಹೇಳಿದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸಾಕಷ್ಟು ಅನುಕೂಲಕರವಾಗಿದೆ. ವಿದೇಶ ಪ್ರಯಾಣ ಮಾಡುವವರು ಸಂಪರ್ಕ ವಿಮಾನ ಸೇವೆಗಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಎಕ್ಸ್‌ಪ್ರೆಸ್ ವೇನಲ್ಲಿ ಪ್ರಯಾಣಿಸುವುದರಿಂದ ಇದು ಸುಲಭವಾಗಲಿದೆ. ಉದ್ಯಮ ವಹಿವಾಟಿಗೂ ಎಕ್ಸ್‌ಪ್ರೆಸ್ ಉತ್ತೇಜನಕಾರಿಯಾಗಿದೆ ಎಂದು ಬೇತಮಂಗಲದ ನಿವಾಸಿ ಬಿ.ಎಂ. ಶ್ರೀನಾಥ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಬೈಕ್, ಆಟೋ, ಟ್ರ್ಯಾಕ್ಟರ್‌ಗೆ ನಿರ್ಬಂಧ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಎರಡು ಟೋಲ್ ಪ್ಲಾಜಾಗಳನ್ನು ಆರಂಭಿಸಲಿದೆ. ಟೋಲ್ ಸಂಗ್ರಹ ಆರಂಭವಾದ ಬಳಿಕ ಎಕ್ಸ್‌ಪ್ರೆಸ್ ವೇನಲ್ಲಿ ಯಾವುದೇ ಬೈಕ್, ಆಟೊ ಹಾಗೂ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಮಾರ್ಗವು ದಾಬಸ್‌ಪೇಟೆಯಿಂದ ಹೊಸಕೋಟೆವರೆಗೆ ಇದ್ದು, ಉಪನಗರ ನಗರ ವರ್ತುಲ ರಸ್ತೆ(STRR) ಗೆ ಸಂಪರ್ಕ ಹೊಂದಿದೆ. ತುಮಕೂರು ರಸ್ತೆ ಮತ್ತು ಬೆಂಗಳೂರು-ಹೈದರಾಬಾದ್ ರಸ್ತೆಯಿಂದ ಬರುವ ಜನರು ಎಕ್ಸ್‌ಪ್ರೆಸ್ ವೇ ಪ್ರವೇಶಿಸಲು ಅನುವು ಮಾಡಿಕೊಡಲಿದೆ.
ದಾಬಸ್ ಪೇಟೆಯಿಂದ ತಮಿಳುನಾಡು ಗಡಿಯವರೆಗೆ ಉಪನಗರ ವರ್ತುಲ ರಸ್ತೆ ನಿರ್ಮಾಣಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಟೆಂಡರ್ ಕರೆದಿದೆ ಎಂದು ಮೂಲಗಳು ತಿಳಿಸಿವೆ.
ಹೊಸಕೋಟೆಯ ಕೊಳತ್ತೂರಿನಲ್ಲಿ ಕೋರಮಂಗಲ-ಚಲ್ಲಘಟ್ಟ (ಕೆಸಿ ವ್ಯಾಲಿ) ನೀರಿನ ಪೈಪ್ಲೈನ್ ಇರುವುದರಿಂದ ಕೊಂಚ ಅಡಚಣೆ ಉಂಟಾಗಿದೆ. ಕೋಲಾರದ ಕಡೆಯಿಂದ ಬರುವ ವಾಹನ ಚಾಲಕರಿಗೆ ಪ್ರವೇಶ ಒದಗಿಸಲು ಮತ್ತು ಕೊಳತ್ತೂರಿನ ಗ್ರಾಮಸ್ಥರಿಗೆ ಅಂಡರ್ಪಾಸ್ ನಿರ್ಮಿಸಲು 480 ಮೀಟರ್ ರಾಂಪ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಹೆದ್ದಾರಿ ಅಗಲೀಕರಣ ಪ್ರಸ್ತಾಪ
ಹೊಸಕೋಟೆಯಿಂದ ಪ್ರಾರಂಭವಾಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಪ್ರವೇಶಿಸಲು ಬೆಂಗಳೂರಿನಿಂದ ಬರುವ ವಾಹನ ಸವಾರರು ಪರದಾಡಬೇಕಿದೆ. ಬೆಂಗಳೂರು ಹಾಗೂ ಕೋಲಾರ ರಾಷ್ಟ್ರೀಯ ಹೆದ್ದಾರಿ-75 ಕಿರಿದಾಗಿರುವ ಕಾರಣ ದಟ್ಟಣೆ ಸಮಸ್ಯೆ ಎದುರಾಗಿದೆ. ಮುಂಬರುವ ದಿನಗಳಲ್ಲಿ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಎಸ್.ವಿ ರಸ್ತೆ ಮೆಟ್ರೋ ನಿಲ್ದಾಣ, ಬೈಯಪ್ಪನಹಳ್ಳಿ, ಬೆನ್ನಿಗಾನಹಳ್ಳಿ, ಟಿನ್ ಫ್ಯಾಕ್ಟರಿ ಮತ್ತು ಕೆಆರ್ ಪುರಗಳಲ್ಲಿ ಸಂಚಾರ ದಟ್ಟಣೆ ಇದೆ. ಇದರಿಂದ ಬೆಂಗಳೂರಿನಿಂದ ಬರುವ ವಾಹನ ಸವಾರರ ವಾಹನ ದಟ್ಟಣೆಯಲ್ಲಿ ಸಿಲುಕಲಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಸ್ತಿತ್ವದಲ್ಲಿರುವ ಚತುಷ್ಪಥವನ್ನು ದಶಪಥಕ್ಕೆ ವಿಸ್ತರಿಸುವ ಪ್ರಸ್ತಾಪವೂ ಇದೆ. ಆ ಮೂಲಕ ಎಕ್ಸ್‌ಪ್ರೆಸ್ ವೇ ಸುಗಮ ಸಂಚಾರವನ್ನು ಖಾತ್ರಿಪಡಿಸಲಾಗುವುದು ಎಂದು ಹೇಳಿದ್ದಾರೆ.