BJP Infighting | ವಿಜಯೇಂದ್ರ ಬದಲಾವಣೆ: ಆರೆಸ್ಸೆಸ್‌ ಮೊರೆಹೋದ ಪಕ್ಷದ ಹಿರಿಯರು

ಲಿಂಗಾಯತ ಸಮುದಾಯದವರಾದರೆ ವಿ.ಸೋಮಣ್ಣ, ಒಕ್ಕಲಿಗರ ಸಮುದಾಯಕ್ಕೆ ಕೊಡುವುದಾದರೆ ಆ‌ರ್.ಅಶೋಕ ಅವರನ್ನು ಪರಿಗಣಿಸಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.;

Update: 2025-02-05 05:29 GMT
ಆರ್‌ ಅಶೋಕ್‌

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಅಧ್ಯಕ್ಷ ಗಾದಿಗೆ ಚುನಾವಣೆ ನಡೆಸುವ ಪಕ್ಷದ ವರಿಷ್ಠರ ಘೋಷಣೆಯ ಬಳಿಕ ತಟಸ್ಥ ಬಣದೊಂದಿಗೆ ಗುರುತಿಸಿಕೊಂಡಿರುವ ಹಲವರು ಕೂಡ ಬದಲಾವಣೆಯ ಪರ ದನಿ ಎತ್ತಿದ್ದಾರೆ. 

ಇದೀಗ ಆ ಕೂಗಿಗೆ ಪೂರಕವಾಗಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕೂಡ ದನಿ ಎತ್ತಿದ್ದು, ಆರ್‌ಎಸ್‌ಎಸ್‌ನ ಹಿರಿಯ ಮುಖಂಡರೊಬ್ಬರನ್ನು ಭೇಟಿ ಮಾಡಿ ಬಿ ವೈ ವಿಜಯೇಂದ್ರ ಅವರನ್ನು ಬದಲಾಯಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. 

'ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ಮತ್ತು ಜಿಲ್ಲಾ ಅಧ್ಯಕ್ಷರ ಸಭೆಗಳನ್ನು ನಾಮಕಾವಸ್ತೆ ಎಂಬಂತೆ ನಡೆಸಿದ್ದು ಬಿಟ್ಟರೆ, ಗಂಭೀರವಾಗಿ ಸಭೆಗಳನ್ನು ನಡೆಸಲಿಲ್ಲ. ಅವರಿಗೆ ಪಕ್ಷವನ್ನು ಮುನ್ನಡೆಸುವಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದರೆ, ಪಕ್ಷ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು. ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು' ಎಂದೂ ಆ ಇಬ್ಬರೂ ಹಿರಿಯ ನಾಯಕರು ಆರ್‌ಎಸ್‌ಎಸ್‌ ಮುಖಂಡರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಲಿಂಗಾಯತ ಸಮುದಾಯದವರಾದರೆ ವಿ.ಸೋಮಣ್ಣ, ಒಕ್ಕಲಿಗರ ಸಮುದಾಯಕ್ಕೆ ಕೊಡುವುದಾದರೆ ಆ‌ರ್.ಅಶೋಕ ಅವರನ್ನು ಪರಿಗಣಿಸಬಹುದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ ಎಂದು ಹೇಳಲಾಗಿದೆ.

ಅದಕ್ಕೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಮುಖಂಡರು, 'ಪಕ್ಷದ ವಿದ್ಯಮಾನಗಳು ಗಮನಕ್ಕೆ ಬಂದಿವೆ. ನೀವು ತಿಳಿಸಿರುವ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆʼ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿರುವ ಈ ಇಬ್ಬರು ರಾಜ್ಯ ಬಿಜೆಪಿ ನಾಯಕರು, ವಿಜಯೇಂದ್ರ ಅವರನ್ನು ಬದಲಿಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ.

ಈ ನಡುವೆ ಬಿ ವೈ ವಿಜಯೇಂದ್ರ ಬಣದ ಕೆಲವರು ಇಂದು(ಬುಧವಾರ) ಬೆಂಗಳೂರಿನಲ್ಲಿ ಸಭೆ ನಡೆಸಿ ವಿಜಯೇಂದ್ರ ಪರ ವರಿಷ್ಠರಿಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ. ಎಂ ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ ಸಿ ಪಾಟೀಲ್‌ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Tags:    

Similar News