Pakistani nationals | ಪಾಕ್ ಪ್ರಜೆಗಳ ಬಂಧನ: ಪೊಲೀಸ್ ತನಿಖೆ ಪೂರ್ಣ, ದೋಷಾರೋಪ ಪಟ್ಟಿ ಸಲ್ಲಿಕೆ
ಈ ಪ್ರಕರಣದಲ್ಲಿ ಒಬ್ಬ ಬಾಲಕಿ ಸೇರಿದಂತೆ ಪುರುಷರು, ಮಹಿಳೆಯರು ಸೇರಿ ಒಟ್ಟು 22 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.;
ಜಿಗಣಿ ಪೊಲೀಸ್ ಠಾಣೆ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆಗಳ ಬಂಧನಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿರುವ ಜಿಗಣಿ ಪೊಲೀಸರು, ಆನೇಕಲ್ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 1200 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಜಿಗಣಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಎರಡು ಪ್ರಕರಣಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಒಬ್ಬ ಬಾಲಕಿ ಸೇರಿದಂತೆ ಪುರುಷರು, ಮಹಿಳೆಯರು ಸೇರಿ ಒಟ್ಟು 22 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಪ್ರಮುಖ ಆರೋಪಿ ರಶೀದ್ ಅಲಿ ಸಿದ್ದಿಕಿ ಪಾಕಿಸ್ತಾನ ಮೂಲದವನೆಂದು ತನಿಖೆಯಲ್ಲಿ ದೃಢಪಟ್ಟಿದೆ. ಆತನ ಬಳಿ ಪಾಕಿಸ್ತಾನದ ಶಾಶ್ವತ ನಿವಾಸ ಪ್ರಮಾಣಪತ್ರ ಪತ್ತೆಯಾಗಿದ್ದು, ದೆಹಲಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತೀಯ ಪಾಸ್‌ಪೋರ್ಟ್ ಪಡೆದು, ವಿದೇಶ ಪ್ರಯಾಣ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಚಾರ್ಜ್ ಶೀಟ್ನಲ್ಲಿ ಮಾಹಿತಿ ನೀಡಲಾಗಿದೆ.
ಬಂಧಿತರು ಪಾಕಿಸ್ತಾನದಲ್ಲಿ ಮೂಲಭೂತವಾದಿ ಮುಖಂಡರಿಂದ ದೌರ್ಜನ್ಯಕ್ಕೆ ಒಳಗಾಗಿ, ಬಾಂಗ್ಲಾದೇಶದ ಮೂಲಕ 2018ರಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದು, ಜಿಗಣಿ ಸಮೀಪ ಬಾಡಿಗೆ ಮನೆದಲ್ಲಿ ವಾಸವಾಗಿದ್ದರು. ಮನೆ ಬಾಡಿಗೆ ವಹಿಸಿದ್ದ ಅಲ್ತಾಫ್ ಎಂಬಾತ ಈ ಕಾರ್ಯಕ್ಕೆ ಸಹಕಾರ ನೀಡಿದ್ದಾನೆ ಎಂದೂ ಉಲ್ಲೇಖಿಸಲಾಗಿದೆ.
ನಕಲಿ ದಾಖಲೆಗಳ ಸೃಷ್ಟಿ
ಆರೋಪಿಗಳು ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ಇದಲ್ಲದೆ, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಪುರ ಗ್ರಾಮದಲ್ಲಿ ವಾಸವಿದ್ದು, ಧಾರ್ಮಿಕ ಪ್ರವಚನ ಪ್ರಚಾರಕ್ಕಾಗಿ ಖಾಸಗಿ ವಾಹಿನಿ ಮಾಧ್ಯಮಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ದಾಳಿ
ಖಚಿತ ಮಾಹಿತಿಯ ಮೇರೆಗೆ ಜಿಗಣಿ ಪೊಲೀಸರು ಅಪ್ನಾ ಅನಗಾ ಲೇಔಟ್ ಪ್ರದೇಶದ ಮನೆ ಮೇಲೆ ದಾಳಿ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಪಾಕಿಸ್ತಾನದ ಲಾಹೋರ್ ಮೂಲದವರು ಹಾಗೂ ಮೆಹದಿ ಫೌಂಡೇಶನ್‌ನ ಧರ್ಮ ಪ್ರವಚನ ಪ್ರಚಾರ ಮಾಡುತ್ತಿದ್ದರು ಎಂದು ತಿಳಿದುಬಂದಿತ್ತು.
ಅಧಿಕೃತ ದಾಖಲೆಗಳಿಲ್ಲದೆ ದೇಶಕ್ಕೆ ನುಸುಳಿದ ಆರೋಪಿಗಳ ಪಾಸ್‌ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.