ಶೈಕ್ಷಣಿಕ ಉಸ್ತುವಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಶಿಕ್ಷಕರ ದತ್ತಾಂಶ ಸಂಗ್ರಹಣೆ ಪೋರ್ಟಲ್‌ಗೆ ಲಾಗಿನ್‌ ಆಗಲು ಕೆ.ಜಿ.ಐ.ಡಿ ಸಂಖ್ಯೆಯನ್ನು ಬಳಸಿ ಇ.ಇ.ಡಿ.ಎಸ್‌ ತಂತ್ರಾಂಶದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಮಾಹಿತಿಯನ್ನು ತಪ್ಪಾಗಿ ನಮೂದಿಸದರೆ ಶಿಕ್ಷಕರೇ ಹೊಣೆಗಾರರಾಗಿರುತ್ತಾರೆ.;

Update: 2025-05-13 06:25 GMT

ಸರ್ಕಾರಿ ಶಾಲೆ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವ ಹಾಗೂ ಶಿಕ್ಷಣದ ಗುಣಮಟ್ಟ ಉತ್ತಮಪಡಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ ಉಸ್ತುವಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರು ಹಾಗೂ ಮುಖ್ಯಶಿಕ್ಷಕರು ಈ ಕೆಳಗಿನ ಇಲಾಖಾ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಅರ್ಜಿ ಸಲ್ಲಿಸಬಹುದು.

  •  ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ)
  •  ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ)
  •  ತಾಂತ್ರಿಕ ಸಹಾಯಕರು
  •  ಶಿಕ್ಷಣ ಸಂಯೋಜಕರು
  •  ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ (ಬಿಆರ್‌ಸಿ)
  •  ಸಹಾಯಕ ಯೋಜನಾ ಸಮನ್ವಯಾಧಿಕಾರಿ (ಎಪಿಸಿ)
  •  ಉಪನಿರ್ದೇಶಕರ ಕಚೇರಿ ಮತ್ತು ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರು
  •  ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಅಭಿಯಾನದ ಸಹಾಯಕ ನಿರ್ದೇಶಕರು

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಶಿಕ್ಷಕರ ದತ್ತಾಂಶ ಸಂಗ್ರಹಣೆ ಪೋರ್ಟಲ್‌ಗೆ ತಮ್ಮ ಕೆಜಿಐಡಿ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಇಇಡಿಎಸ್ ತಂತ್ರಾಂಶದ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಶೈಕ್ಷಣಿಕ ಅರ್ಹತೆ, ಸೇವಾ ಅನುಭವ, ಗಣಕಯಂತ್ರ ತರಬೇತಿ ಮತ್ತು ಶೈಕ್ಷಣಿಕ ಪ್ರಕಟಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು. ಇದರೊಂದಿಗೆ, ಮೂಲ ಪ್ರತಿಗಳನ್ನು ಆಯಾ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಅರ್ಹತೆಗಳೇನು?

* ಅಭ್ಯರ್ಥಿಯ ಕಾಯಂ ಸೇವಾವಧಿ ತೃಪ್ತಿಕರವಾಗಿರಬೇಕು.

* ಅರ್ಜಿ ಸಲ್ಲಿಸುವವರಿಗೆ 55 ವರ್ಷ ವಯೋಮಿತಿ ಮೀರಬಾರದು. ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕರ ಹುದ್ದೆಗೆ ಗರಿಷ್ಠ ವಯೋಮಿತಿ 57 ವರ್ಷಗಳು.

* ವಿಷಯ ಪರಿವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರೌಢಶಾಲೆಗಳಲ್ಲಿ ಮುಖ್ಯಶಿಕ್ಷಕರಾಗಿ ಕನಿಷ್ಠ 10 ವರ್ಷಗಳ ಬೋಧನಾ ಅನುಭವ ಹೊಂದಿರಬೇಕು.

* ಅಭ್ಯರ್ಥಿಗಳು ಪ್ರಸ್ತುತ ಹುದ್ದೆ ಮತ್ತು ಸ್ಥಳದಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿರಬೇಕು.

* ಈ ಹಿಂದೆ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಶಾಲೆಗೆ ವರ್ಗಾವಣೆಗೊಂಡವರು ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸಿರಬೇಕು.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯು ಒಟ್ಟು 200 ಅಂಕಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ತಲಾ 85 ಅಂಕಗಳ ಎರಡು ಲಿಖಿತ ಪತ್ರಿಕೆಗಳು ಮತ್ತು ಅಭ್ಯರ್ಥಿಗಳ ಹೆಚ್ಚಿನ ವಿದ್ಯಾರ್ಹತೆ ಹಾಗೂ ಸೇವಾ ಅನುಭವಕ್ಕೆ 30 ಅಂಕಗಳು ಇರುತ್ತವೆ. ಎಲ್ಲಾ ಅಧಿಸೂಚಿತ ಹುದ್ದೆಗಳಿಗೂ ಲಿಖಿತ ಪರೀಕ್ಷೆಗಳು ಜೂನ್ 8 ರಿಂದ 10 ರವರೆಗೆ ಆಯಾ ಜಿಲ್ಲೆಯ ಡಯಟ್‌ಗಳಲ್ಲಿ ನಡೆಯಲಿವೆ. ಶಾಲಾ ಶಿಕ್ಷಣ ಇಲಾಖೆಯು ಮೌಲ್ಯಮಾಪನ ನಡೆಸಿ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಲಿದ್ದು, ಅರ್ಹತಾ ಪಟ್ಟಿಯ ಆಧಾರದ ಮೇಲೆ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಲಿದ್ದಾರೆ.

Tags:    

Similar News