Anna Bhagya Scheme | ಅನ್ನಭಾಗ್ಯ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ವಿತರಣೆ
ಅನ್ನಭಾಗ್ಯ, ಅಂತ್ಯೋದಯ ಯೋಜನೆಯಡಿ ಪಡಿತರದಾರರಿಗೆ ನೇರ ನಗದು ವರ್ಗಾವಣೆ ಮೂಲಕ ನೀಡುತ್ತಿದ್ದ ಹಣದ ಬದಲು ಅಕ್ಕಿಯನ್ನೇ ನೀಡುವ ಆದೇಶಕ್ಕೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.
ಪಡಿತರದ 5 ಕೆಜಿ ಅಕ್ಕಿಗೆ ಬದಲಾಗಿ ರಾಜ್ಯ ಸರ್ಕಾರ ನೇರ ನಗದು ವರ್ಗಾವಣೆ ಮೂಲಕ 170 ರೂ ಪಾವತಿಸುತ್ತಿತ್ತು. ಫೆ.19ರಂದು ಅಕ್ಕಿಗೆ ನೀಡುವ ನೇರ ನಗದು ವರ್ಗಾವಣೆ ನಿಲ್ಲಿಸಿ, 5 ಕೆ ಜಿ ಅಕ್ಕಿಯನ್ನೇ ನೀಡಲು ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇನ್ನು ಮುಂದೆ ಪಡಿತರ ವ್ಯವಸ್ಥೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 10 ಕೆ.ಜಿ ಅಕ್ಕಿ ಸಿಗಲಿದೆ. ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ವಿತರಿಸುವ ಗ್ಯಾರಂಟಿ ಯೋಜನೆಯನ್ನು ಘೋಷಿಸಿತ್ತು.
2023ರ ಜುಲೈನಿಂದ ಫಲಾನುಭವಿಗಳಿಗೆ 5ಕೆಜಿ ಅಕ್ಕಿ ನೀಡಿ, ಉಳಿದ 5ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿತ್ತು.
ಕೇಂದ್ರದಿಂದ ಅಕ್ಕಿ ಖರೀದಿ
ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ ತಿಂಗಳಿಂದಲೇ ಅಕ್ಕಿ ಪೂರೈಸಿ, ನಗದು ವರ್ಗಾವಣೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ.
ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಬಾಕಿ ಜಮೆ ಮಾಡಲಿದೆ. ಜನವರಿಯಲ್ಲಿ ನೀಡಬೇಕಿದ್ದ ಹಣಕ್ಕೆ ಬದಲಾಗಿ ಫೆಬ್ರುವರಿ ಪಡಿತರದಲ್ಲಿ 5 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡಲು ತೀರ್ಮಾನಿಸಿದೆ.
2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಪ್ರತಿ ತಿಂಗಳು ಅಗತ್ಯವಿದ್ದ ಅಕ್ಕಿ ಪೂರೈಸಲು ನಿರಾಕರಿಸಿತ್ತು. ಹಾಗಾಗಿ, ಅಕ್ಕಿ ಬದಲು ನಗದು ನೀಡಲು ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತ್ತು. ಈಗ ಕೆ.ಜಿ.ಗೆ ₹22.90ರಂತೆ ಜೂನ್‌ವರೆಗೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಪ್ರತಿ ತಿಂಗಳು ₹190 ಕೋಟಿ ಉಳಿತಾಯ
ಕೇಂದ್ರ ಸರ್ಕಾರ ಕೆ.ಜಿ.ಗೆ ₹22.50ರಂತೆ ಅಕ್ಕಿ ಸರಬರಾಜು ಮಾಡಲು ಒಪ್ಪಿಗೆ ನೀಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ₹190 ಕೋಟಿ ಉಳಿತಾಯವಾಗಲಿದೆ ಎಂದು ಆಹಾರ ಮತ್ತು ನಾಗರೀಕ ಖಾತೆ ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಅನ್ನಭಾಗ್ಯ ಯೋಜನೆ ಆರಂಭಿಸಿದಾಗ ಕೆಜಿ ಗೆ 34.60 ರೂ.ನೀಡಲು ಸಿದ್ಧವಿದ್ದರೂ ಅಗತ್ಯ ಅಕ್ಕಿ ದೊರೆತಿರಲಿಲ್ಲ. ಹಾಗಾಗಿ ಅಷ್ಟೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ನಿರ್ಧಾರ ಮಾಡಲಾಗಿತ್ತು. ಈಗ ₹22.50 ದರದಂತೆ ಅಕ್ಕಿ ಸಿಗುತ್ತಿದ್ದು ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.