Nandini Milk | ಹಾಲಿನ ದರ ಏರಿಕೆ ಸುಳಿವು ಕೊಟ್ಟ ಪಶುಸಂಗೋಪನಾ ಸಚಿವ

ಉತ್ಪಾದನಾ ವೆಚ್ಚವನ್ನು ಪರಿಗಣಿಸಿಯೇ ದರ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ. ಉತ್ಪಾದಕರಿಗೂ ನಷ್ಟವಾಗಬಾರದು ಮತ್ತು ಗ್ರಾಹಕರಿಗೂ ವಿಪರೀತ ಹೊರೆಯಾಗದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಬೇಕಿದೆ.;

Update: 2025-03-06 08:48 GMT

ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ. 

ಹಾಲಿನ ದರ ಏರಿಸುವ ಮತ್ತು ಅದನ್ನು ಗ್ರಾಹಕರಿಂದ ಭರಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವ ಸಂಬಂಧ ವಿಧಾನ ಪರಿಷತ್ತಿನಲ್ಲಿ ಬುಧವಾರ ಬಿಜೆಪಿಯ ಹೇಮಲತಾ ನಾಯಕ್ ಮತ್ತು ಎಂ.ಜಿ.ಮುಳೆ ಹಾಗೂ ಕಾಂಗ್ರೆಸ್‌ನ ಉಮಾಶ್ರೀ ಅವರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಾಲಿನ ದರ ಏರಿಸುವ ಅಗತ್ಯವಿದೆ ಎಂದು ಹೇಳಿದರು.

'ಹಾಲಿನ ಖರೀದಿ ದರ ಹೆಚ್ಚಿಸಬೇಕು ಎಂದು ರೈತರು ಮತ್ತು ಹಾಲು ಉತ್ಪಾದಕರ ಸಂಘಗಳು ಬೇಡಿಕೆ ಸಲ್ಲಿಸುತ್ತಲೇ ಇವೆ. ಮೇವು ಮತ್ತಿತರ ವೆಚ್ಚ ಸೇರಿ ಹಾಲು ಉತ್ತಾದನಾ ವೆಚ್ಚ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿಯೇ ಖರೀದಿ ದರ ಹೆಚ್ಚಿಸಬೇಕು ಎಂಬುದು ಉತ್ಪಾದಕರ ಒತ್ತಾಯ' ಎಂದು ಅವರು ಸದನಕ್ಕೆ ವಿವರಿಸಿದರು.

'ಹಾಲು ಉತ್ಪಾದಕರು ಕೇಳುತ್ತಿರುವುದರಲ್ಲೂ ನ್ಯಾಯವಿದೆ. ಈಗಿನ ಖರೀದಿ ದರದಿಂದ ಅವರಿಗೆ ನಷ್ಟವಾಗುತ್ತಿದೆ. ಹೀಗಾಗಿ ದರ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದರವನ್ನು ಎಷ್ಟು ಹೆಚ್ಚಿಸಬೇಕು ಎಂಬುದು ನಿರ್ಧಾರವಾಗಿಲ್ಲ. ಈ ಹಿಂದೆ ಪ್ರತಿ ಲೀಟರ್ ಖರೀದಿ ದರದಲ್ಲಿ ₹2 ಏರಿಕೆ ಮಾಡಿದಾಗ, ಸರ್ಕಾರವೇ ಅದನ್ನು ಭರಿಸಿತ್ತು. ಆದರೆ ಈಗ ಮಾರಾಟ ದರವನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆದಿದೆ' ಎಂದರು.

'ಉತ್ಪಾದನಾ ವೆಚ್ಚವನ್ನು ಪರಿಗಣಿಸಿಯೇ ದರ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ. ಉತ್ಪಾದಕರಿಗೂ ನಷ್ಟವಾಗಬಾರದು ಮತ್ತು ಗ್ರಾಹಕರಿಗೂ ವಿಪರೀತ ಹೊರೆಯಾಗದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಬೇಕಿದೆ. ಅದರ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ' ಎಂದರು.

Tags:    

Similar News