Gold Smuggling | ಚಿನ್ನ ಕಳ್ಳಸಾಗಣೆ: ಅಂತಾರಾಷ್ಟ್ರೀಯ ಸ್ಮಗ್ಲಿಂಗ್‌ ಜಾಲದಲ್ಲಿ ರನ್ಯಾ ರಾವ್‌? ತನಿಖೆ ಮುಂದುವರಿಸಿದ ಡಿಆರ್‌ಐ

ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ನಟಿ ರನ್ಯಾ ಹೇಳಿದ್ದಾರೆ.;

Update: 2025-03-06 14:09 GMT

ನಟಿ ರನ್ಯಾ

ಅಕ್ರಮ ಚಿನ್ನಸಾಗಣೆ  ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ನ್ಯಾಯಾಂಗ ಬಂಧನದಲ್ಲಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಈ ಪ್ರಕರಣದಲ್ಲಿ ನಟಿಯ ಮಲತಂದೆ ರಾಮಚಂದ್ರರಾವ್ ಅವರ ಪಾತ್ರವೂ ಇದೆಯೇ ಎಂಬ ವಿಷಯದ ಬಗ್ಗೆ ಡಿಆರ್​ಐ ಅಧಿಕಾರಿಗಳು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ನಟಿಯ ವಿಚಾರಣೆ ವೇಳೆ ಕೆಲ ಮಹತ್ವದ ವಿಷಯಗಳನ್ನು ನಟಿ ಹೇಳಿದ್ದಾಗಿ ವರದಿ ಆಗಿದೆ.

ತಾನು ಇದೇ ಮೊದಲ ಬಾರಿಗೆ ಚಿನ್ನವನ್ನು ತಂದಿದ್ದಾಗಿ ನಟಿ ರನ್ಯಾ ವಿಚಾರಣಾ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೆ ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸಹ ನಟಿ ಹೇಳಿದ್ದಾರೆ ಎನ್ನಲಾಗುತ್ತಿದೆ. ರನ್ಯಾ ಯಾರಿಂದ ಚಿನ್ನ ಪಡೆದುಕೊಂಡು ಇಲ್ಲಿಗೆ ತರುತ್ತಿದ್ದರು? ರನ್ಯಾ ತಂದ ಚಿನ್ನವನ್ನು ಇಲ್ಲಿ ಯಾರು ಪಡೆದುಕೊಳ್ಳುತ್ತಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಡಿಆರ್​ಐ ಕಲೆಹಾಕುತ್ತಿದೆ. 

ರನ್ಯಾರ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಮೇಲೂ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಭದ್ರತೆಯಿಂದ ವಿನಾಯಿತಿ ಸಿಗಲು ರಾಮಚಂದ್ರ ರಾವ್ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆಗಳು ನಡೆಯುತ್ತಿವೆ. ರನ್ಯಾ ಪ್ರತಿಬಾರಿ ವಿಮಾನ ನಿಲ್ದಾಣಕ್ಕೆ ಹೋದಾಗಲೂ ಸರ್ಕಾರದ ಉನ್ನತ ಅಧಿಕಾರಿಗಳು ಬಳಸುವ ಪ್ರೋಟೊಕಾಲ್ ಬಳಸಿ ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಹಾಗಾಗಿ ಅವರು ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನದ ಪತ್ತೆ ಆಗಿರಲಿಲ್ಲ.

ರನ್ಯಾ ರಾವ್ ತನ್ನ ತೊಡೆಗಳಿಗೆ ಚಿನ್ನದ ಬಿಸ್ಕತ್ತುಗಳನ್ನು ಜೋಡಿಸಿ ಅದನ್ನು ಕಾರ್ಬನ್ ಹಾಳೆಗಳಿಂದ ಮುಚ್ಚಿ, (ವಿಮಾನ ನಿಲ್ದಾಣದಲ್ಲಿ ಸ್ಕ್ಯಾನಿಂಗ್ ತಪ್ಪಿಸಲು), ಕ್ರೇಪ್ ಬ್ಯಾಂಡ್‌ಗಳಿಂದ ಸುತ್ತಿ,  ಅದರ ಮೇಲೆ ಬಟ್ಟೆ ಧರಿಸಿ ತಪಾಸಣೆ ಸಂದರ್ಭದಲ್ಲಿ ತಪ್ಪಿಸಿಕೊಳ್ಳುತ್ತಿದ್ದಳು. ನಟಿ ರನ್ಯಾ ಕೇವಲ 15 ದಿನದಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿರುವುದು ಮೊದಲಿಗೆ ಅನುಮಾನಕ್ಕೆ ಕಾರಣವಾಗಿದೆ. ರನ್ಯಾ, ದುಬೈಗೆ ಹೋದ ಮರುದಿನವೇ ಭಾರತಕ್ಕೆ ವಾಪಸ್ಸಾಗುತ್ತಿದ್ದರಂತೆ. ರನ್ಯಾ, ದುಬೈನಲ್ಲಿ ಯಾರನ್ನು ಭೇಟಿ ಮಾಡುತ್ತಿದ್ದರು. ಅವರ ಹಿಂದಿರುವ ವ್ಯಕ್ತಿಗಳು ಯಾರು? ಎಂಬಿತ್ಯಾದಿ ಅಂಶಗಳ ಬಗ್ಗೆ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. 

ರನ್ಯಾ ರಾವ್ ಕಿಚ್ಚ ಸುದೀಪ್ ಮತ್ತು ತಮಿಳು ಬ್ಯಾನರ್‌ಗಳ ಸಿನಿಮಾದಲ್ಲಿ ನಟಿಸಿದ್ದಾಳೆ. ಆದರೆ  ಸುಮಾರು ಐದರಿಂದ ಏಳು ವರ್ಷಗಳಿಂದ ಸಿನಿಮಾ ಜಗತ್ತಿನಿಂದ  ಹೊರಗಿದ್ದಾರೆ. ಈ ಅವಧಿಯಲ್ಲಿ ಅವರು ಕಳ್ಳಸಾಗಣೆ ಜಾಲಗಳೊಂದಿಗೆ ಸಂಪರ್ಕದಲ್ಲಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಯಾವುದೇ ದೊಡ್ಡ ಕಳ್ಳಸಾಗಣೆ ಸಿಂಡಿಕೇಟ್‌ನಲ್ಲಿ ಅವರ ಪಾಲ್ಗೊಗೊಂಡಿದ್ದಾರೆಯೇ ಎಂದು ಅಧಿಕಾರಿಗಳು ಇನ್ನಷ್ಟೇ ಪರಿಶೀಲನೆ ನಡೆಸಬೇಕಾಗಿದೆ. 

ಡ್ರಗ್ಸ್‌  ಜಾಲದ ತನಿಖೆ

ಈ ಪ್ರಕರಣವು ಮಾದಕವಸ್ತು-ಚಿನ್ನದ ವ್ಯಾಪಾರದ ಸಂಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ತನಿಖಾಧಿಕಾರಿಗಳು ಅದೇ ಅಂತರರಾಷ್ಟ್ರೀಯ ಕಾರ್ಟೆಲ್‌ಗಳು ಮಾದಕವಸ್ತುಗಳನ್ನು ರಫ್ತು ಮಾಡುವ ಮತ್ತು ಭಾರತಕ್ಕೆ ಚಿನ್ನವನ್ನು ಆಮದು ಮಾಡಿಕೊಳ್ಳುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ತನಿಖೆ ಮುಂದುವರಿದಿದ್ದರೂ, ಪ್ರಕರಣದ ಬಗ್ಗೆ ಅಧಿಕೃತ ಹೇಳಿಕೆ ನೀಡಲು  ಅಧಿಕಾರಿಗಳು ನಿರಾಕರಿಸಿದ್ದಾರೆ.

ಮಾರ್ಚ್ 3, 2025 ರಂದು ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದ ತಕ್ಷಣ ಆಕೆಯನ್ನು ತಡೆದ ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರನ್ಯಾ ಅವರ ಬಳಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಈ ಚಿನ್ನದ ಬಿಸ್ಕೆತ್‌ಗಳನ್ನು 1962 ರ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಅವರ ನಿವಾಸದಲ್ಲಿ ನಡೆಸಿದ ಮುಂದಿನ ಶೋಧದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ.ಗಳಿಗೆ ತಲುಪಿದೆ.

ತಂದೆಯ ಪ್ರಕರಣ

ರನ್ಯಾ ಅವರ ಮಲತಂದೆ ರಾಮಚಂದ್ರ ರಾವ್ ಸ್ವತಃ ಒಮ್ಮೆ ಹಗರಣದಲ್ಲಿ ಸಿಲುಕಿಕೊಂಡಿದ್ದರು. 2014 ರಲ್ಲಿ, ಅವರು ಐಜಿಪಿ (ದಕ್ಷಿಣ ವಲಯ) ಆಗಿದ್ದಾಗ, ಕೇರಳ ಮೂಲದ ಆಭರಣ ವ್ಯಾಪಾರಿಯಿಂದ ಮೈಸೂರು ಪೊಲೀಸರು ವಶಪಡಿಸಿಕೊಂಡಿದ್ದ 2 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲಿತ್ತು. ನಂತರ ಸಿಐಡಿ ಪ್ರಕರಣದ ತನಿಖೆ ನಡೆಸಿ, ಅವರ ಗನ್ ಮ್ಯಾನ್ ಅನ್ನು ಡಕಾಯಿತಿ ಆರೋಪದ ಮೇಲೆ ಬಂಧಿಸಿದ್ದನ್ನು ಸ್ಮರಿಸಬಹುದು.

Tags:    

Similar News