Gold Smuggling | ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣಿಕೆ ಪ್ರಕರಣ: ಪ್ರಭಾವಿ ಸ್ವಾಮೀಜಿ ಶಾಮೀಲು?
ಸ್ವಾಮೀಜಿ ದುಬೈನಲ್ಲಿ ಆಫೀಸ್ ತೆರೆದು ಡಿಲೀಂಗ್ ನಡೆಸುತ್ತಿದ್ದ. ಆಫೀಸ್ನಲ್ಲಿ ಸ್ವಾಮೀಜಿ ಕ್ರಿಫ್ಟೋ ಕರೆನ್ಸಿ, ಹಣ ವಿನಿಮಯ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ.;
ನಟಿ ರನ್ಯಾ ರಾವ್
ಚಿನ್ನ ಕಳ್ಳಸಾಗಾಣಿಕೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಮತ್ತು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, ರನ್ಯಾ ರಾವ್ ಜೊತೆ ರಾಜ್ಯದ ಪ್ರಭಾವಿ ಸ್ವಾಮೀಜಿಯೊಬ್ಬ ಶಾಮೀಲಾಗಿರುವುದು ತಿಳಿದುಬಂದಿದೆ.
ನಟಿ ರನ್ಯಾ ರಾವ್, ತರುಣ್ ರಾಜ್ ಮತ್ತು ಪ್ರಭಾವಿ ಸ್ವಾಮೀಜಿ ಸೇರಿದಂತೆ ಈ ಮೂವರ ಗುಂಪು ಚಿನ್ನ ಕಳ್ಳಸಾಗಾಣಿಕೆಯಲ್ಲಿ ಶಾಮೀಲಾಗಿದ್ದಾರೆ. ಸ್ವಾಮೀಜಿ ದುಬೈನಲ್ಲಿ ಆಫೀಸ್ ತೆರೆದು ಡೀಲಿಂಗ್ ನಡೆಸುತ್ತಿದ್ದ. ಆಫೀಸ್ನಲ್ಲಿ ಸ್ವಾಮೀಜಿ ಕ್ರಿಪ್ಟೋಕರೆನ್ಸಿ , ಹಣ ವಿನಿಮಯ ವ್ಯವಹಾರ ಮಾಡುತ್ತಿದ್ದ. ಸ್ವಾಮೀಜಿ ರಾಜಕೀಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಬೆಂಗಳೂರಿನಲ್ಲಿರುವ ಸ್ವಾಮೀಜಿ ಮನೆ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು ಎಂದು ಡಿಆರ್‌ಐ ಮೂಲಗಳು ಹೇಳಿವೆ.
ಏನಿದು ಪ್ರಕರಣ?
ಮಾರ್ಚ್ 3, 2025 ರಂದು ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದ ತಕ್ಷಣ ಆಕೆಯನ್ನು ತಡೆದ ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ರನ್ಯಾ ಬಳಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು. ಈ ಚಿನ್ನದ ಬಿಸ್ಕೆತ್‌ಗಳನ್ನು 1962 ರ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅವರ ನಿವಾಸದಲ್ಲಿ ನಡೆಸಿದ ಮುಂದಿನ ಶೋಧದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ.ಗಳಿಗೆ ತಲುಪಿತ್ತು. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.