Actor Darshan Case | ಮನೆ ಊಟಕ್ಕೆ ಪಟ್ಟು: ಮ್ಯಾಜಿಸ್ಟ್ರೇಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ

ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮೊದಲು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅನುಮತಿ ನಿರಾಕರಿಸಿತ್ತು. ಕೋರ್ಟ್ ಆದೇಶ ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

Update: 2024-07-30 12:04 GMT
ನಟ ದರ್ಶನ್‌
Click the Play button to listen to article

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್, ತಮಗೆ ಜೈಲಿನ ಊಟ ಒಗ್ಗುತ್ತಿಲ್ಲ. ಮನೆ ಊಟ ಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ದರ್ಶನ್‌ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. 

ಮನೆ ಊಟ, ಬಟ್ಟೆ, ಹಾಸಿಗೆಗಾಗಿ ದರ್ಶನ್ ಪರ ವಕೀಲ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.  

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ತನಗೆ ಜೈಲೂಟ ಹಿಡಿಸುತ್ತಿಲ್ಲ, ಮನೆ ಊಟ ತರಿಸಿಕೊಳ್ಳಲು ಅವಕಾಶ ಕೊಡಿ ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ಬೆಂಗಳೂರಿನ 34ನೇ ಎಸಿಎಮ್ಎಮ್ ನ್ಯಾಯಾಲಯದ ನ್ಯಾಯಾಧೀಶರು, ದರ್ಶನ್‌ಗೆ ಜೈಲೂಟದ ಬದಲಿಗೆ ಮನೆಯಿಂದ ಊಟ ತರಿಸಿಕೊಡಲು ಅವಕಾಶ ನಿರಾಕರಿಸಿದ್ದರು. ಕೊಲೆ ಆರೋಪದಡಿ ನಟ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಮನೆಯೂಟ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜಡ್ಜ್ ವಿಶ್ವನಾಥ್ ಸಿ ಗೌಡರ್ ಆದೇಶ ನೀಡಿ ದರ್ಶನ್‌ ಅರ್ಜಿಯನ್ನು ತಿರಸ್ಕರಿಸಿದ್ದರು.

ಪ್ರಕರಣದ ಹಿನ್ನಲೆ

ದರ್ಶನ್ ಆಪ್ತ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರೋಪಿಗಳಲ್ಲಿ ಒಬ್ಬನಾದ ರಾಘವೇಂದ್ರ ಎಂಬಾತ ರೇಣುಕಾ ಸ್ವಾಮಿಯನ್ನು ದರ್ಶನ್ ಭೇಟಿ ನೆಪದಲ್ಲಿ ಬೆಂಗಳೂರಿನ ಆರ್ ಆರ್ ನಗರದ ಶೆಡ್‌ಗೆ ಕರೆತಂದಿದ್ದ. ಇದೇ ಶೆಡ್‌ನಲ್ಲಿಯೇ ಜೂನ್ 8 ರಂದು ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.

ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯ ಶವವನ್ನು ಮೋರಿಗೆ ಎಸೆದು ಹೋಗಿದ್ದರು. ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದು ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಈ ಕೊಲೆಯ ಹಿಂದಿನ ರೂವಾರಿ ದರ್ಶನ್ ಎಂದು ತಿಳಿದುಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಶೀಘ್ರವೇ ದರ್ಶನ್ ಅವರ ನ್ಯಾಯಾಂಗ ಬಂಧನ ಪೂರ್ಣಗೊಳ್ಳಲಿದೆ. ಅವರನ್ನು ಮತ್ತೆ ಪೊಲೀಸರು ಕೋರ್ಟ್ ಎದುರು ಹಾಜರುಪಡಿಸಲಿದ್ದಾರೆ.

Tags:    

Similar News