ಕೇಂದ್ರದ ಮಾದರಿಯಂತೆ ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ: ಸಚಿವ ಜಮೀರ್ ಅಹಮದ್

2019 ರ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಚಿಸಿದ್ದ ಸಂಪುಟ ಉಪ ಸಮಿತಿ ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಮೀಸಲಾತಿ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.;

Update: 2025-06-20 11:29 GMT
ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 15ರಷ್ಟು ಮೀಸಲಾತಿ ನೀಡಿದ ಸರ್ಕಾರದ ನಿರ್ಧಾರವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ರಚಿಸಿದ್ದ 'ಸಾಚಾರ್ ಸಮಿತಿ' ವರದಿಯ ಪ್ರಕಾರ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಈಗಾಗಲೇ ಶೇಕಡಾ 15ರಷ್ಟು ಮೀಸಲಾತಿ ನೀಡಲಾಗಿದ್ದು, ರಾಜ್ಯದಲ್ಲೂ ಅದೇ ಮಾದರಿಯನ್ನು ಅನುಸರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 15ರಷ್ಟು ಮೀಸಲಾತಿ ನೀಡಿದ್ದಕ್ಕೆ ಪ್ರತಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಚಿವರು, ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಈಗಿನ ತೀರ್ಮಾನವಲ್ಲ ಎಂದು ಹೇಳಿದರು. 2019ರ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರಚಿಸಿದ್ದ ಸಂಪುಟ ಉಪ ಸಮಿತಿಯು ಈ ಮೀಸಲಾತಿಗೆ ಶಿಫಾರಸ್ಸು ಮಾಡಿತ್ತು. ಇದೀಗ ಈ ಶಿಫಾರಸ್ಸು ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ. ಈಗಾಗಲೇ ಇದ್ದ ಶೇಕಡಾ 10ರಷ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 15ಕ್ಕೆ ಹೆಚ್ಚಿಸಲಾಗಿದೆ ಎಂದರು.

ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಚ್ಚಿನ ಬಡ ಕುಟುಂಬಗಳಿದ್ದು, ವಸತಿ ರಹಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ಬೇಡಿಕೆ ಇತ್ತು. 2021ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಸಹ ಶೇಕಡಾ 15ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿತ್ತು ಎಂದು ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು. ನಿಖರ ಮಾಹಿತಿ ತಿಳಿಯದೆ ಪ್ರತಿಪಕ್ಷಗಳು ಅನಗತ್ಯ ಟೀಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 

Tags:    

Similar News