ಬೆಂಗಳೂರಿನಲ್ಲಿ 1,500 ಕೋಟಿ ರೂ. ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು: ಸಚಿವ ಈಶ್ವರ್ ಖಂಡ್ರೆ
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.;
ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು ಮಹಾನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿತ್ತು. ತಾನು ಸಚಿವನಾದ ನಂತರ 2 ವರ್ಷದಲ್ಲಿ ಸುಮಾರು 1,500 ಕೋಟಿ ರೂ. ಮಾರುಕಟ್ಟೆ ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅರಣ್ಯ ಜಮೀನು ಹಿಂಪಡೆದು, ಉದ್ಯಾನವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕಾನೂನು ಹೋರಾಟ ಮುಂದುವರಿಸಿದ್ದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಹಳೆ ಮೈಸೂರು ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ವಿವಿಧ ವ್ಯಕ್ತಿ, ಸಂಸ್ಥೆಗಳಿಗೆ ಸುಮಾರು 5050 ಎಕರೆ ಅರಣ್ಯ ಭೂಮಿಯನ್ನು ದೀರ್ಘಕಾಲದ (999 ವರ್ಷ) ಗುತ್ತಿಗೆ ನೀಡಲಾಗಿತ್ತು. ಈ 999 ವರ್ಷದ ಗುತ್ತಿಗೆ ಅವಧಿಯನ್ನು ಸರ್ಕಾರ 99 ವರ್ಷಕ್ಕೆ ಇಳಿಕೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈಗ ಇವುಗಳಲ್ಲಿ ಕೆಲವು ಗುತ್ತಿಗೆ ಅವಧಿ ಮುಗಿದಿದ್ದರೂ ಅರಣ್ಯ ಇಲಾಖೆಗೆ ಜಮೀನು ಬಿಟ್ಟುಕೊಡದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲ ಭೂಮಿ ಹಿಂಪಡೆಯಲು ಕಾನೂನು ಹೋರಾಟ ಮಾಡಲಾಗುತ್ತಿದೆ. ಹೈಕೋರ್ಟ್ ನಲ್ಲಿ ಈ ಪ್ರಕರಣಗಳ ಅರ್ಜಿಯ ವಿಚಾರಣೆ ಹಂತದಲ್ಲಿದೆ ಎಂದು ವಿವರ ನೀಡಿದರು.
ಹಲವು ದಶಕಗಳ ಬೇಡಿಕೆ ಈಡೇರಿಕೆ
ಬೆಂಗಳೂರು ನಗರದ ಹೆಸರಘಟ್ಟದಲ್ಲಿ ಅಪರೂಪದ ಹುಲ್ಲುಗಾವಲಿದೆ. ಇದು ನೂರಾರು ಪ್ರಭೇದದ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗದ್ದು, ಇಷ್ಟು ಸುಂದರ ಪರಿಸರ ಉಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ತಾವು ಸಚಿವನಾದ ಬಳಿಕ ಹಲವು ಒತ್ತಡದ ನಡುವೆಯೂ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ತಿಳಿಸಿದರು.
ಸರ್ಕಾರದ ಈ ನಿರ್ಧಾರಕ್ಕೆ ಪಕ್ಷಭೇದ ಮರೆತು ಎಲ್ಲ ಕ್ಷೇತ್ರದ ಗಣ್ಯರೂ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಉತ್ತಮ ಕಾರ್ಯ ಮಾಡಿದಾಗ ಸಿಗುವ ಆನಂದ ಅಪರಿಮಿತ ಎಂದು ಸಂತಸ ವ್ಯಕ್ತಪಡಿಸಿದರು. ನಗರದ ಶ್ವಾಸತಾಣಗಳನ್ನು ಉಳಿಸಲು, ಬೆಳೆಸಲು ಸರ್ಕಾರ ನಿರ್ಧರಿಸಿದ್ದು, ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಲಾಲ್‌ಬಾಗ್ ಉದ್ಯಾನವನ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ನಾನು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ. 2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು, 2 ತಿಂಗಳಲ್ಲಿ ಇದರ ಶಂಕುಸ್ಥಾಪನೆ ನೆರವೇರಲಿದೆ ಎಂದರು.