ದುನಿಯಾ ವಿಜಯ್‌, ಎಸ್‌.ನಾರಾಯಣ್ ಕಾಂಬಿನೇಶನ್‌ ಮೂರನೇ ಸಿನಿಮಾ

ಮೂರನೇ ಬಾರಿಗೆ ನಟ 'ದುನಿಯಾ' ವಿಜಯ್ ಜೊತೆ ನಿರ್ದೇಶಕ ಎಸ್ ನಾರಾಯಣ್ ಕೈಜೋಡಿಸಿದ್ದಾರೆ.;

Update: 2024-06-03 11:54 GMT
ನಟ ದುನಿಯಾ ವಿಜಯ್‌
Click the Play button to listen to article

ಡಾ. ಎಸ್‌.ನಾರಾಯಣ್ ಅವರು ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಮುಂತಾದ ದಿಗ್ಗಜರ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ. ದುನಿಯಾ ವಿಜಯ್‌ ಹಾಗೂ ಎಸ್‌.ನಾರಾಯಣ್ ಕಾಂಬಿನೇಶನ್‌ನಲ್ಲಿ 2007ರಲ್ಲಿ 'ಚಂಡ' ಸಿನಿಮಾ ತೆರೆಕಂಡಿತ್ತು. ಆದರೆ ಈ ಸಿನಿಮಾ ರಿಲೀಸ್‌ಗೂ ಮನ್ನ ಕಿತ್ತಾಡಿಕೊಂಡು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದರು. ಈ ವಿವಾದದದ ಬಳಿಕ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಂಟು ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗಿ 'ದಕ್ಷ' ಸಿನಿಮಾ ಮಾಡಿತು.

ಇದೀಗ ಪುನಃ ಮೂರನೇ ಬಾರಿಗೆ ನಟ 'ದುನಿಯಾ' ವಿಜಯ್ ಜೊತೆ ನಿರ್ದೇಶಕ ಎಸ್ ನಾರಾಯಣ್ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ 'ದುನಿಯಾ' ವಿಜಯ್ ಜೊತೆಗೆ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಬಣ್ಣ ಹಚ್ಚುತ್ತಿದ್ದಾರೆ. ಪ್ರೊಡಕ್ಷನ್ ನಂ 1 ಹೆಸರಿನಲ್ಲಿ ಶೂಟಿಂಗ್ ಆರಂಭಿಸಿರುವ ನಿರ್ದೇಶಕ ಎಸ್ ನಾರಾಯಣ್, ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಇದರಲ್ಲಿ ಶ್ರೇಯಸ್ ಮಂಜು ಭಾಗಿಯಾಗಿದ್ದರು. ಇದೀಗ ನಟ 'ದುನಿಯಾ' ವಿಜಯ್ ಕೂಡ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಲಿದ್ದು, ಜೂನ್ 5ರಿಂದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರ ಪಾಲ್ಗೊಳ್ಳುವಿಕೆಯಲ್ಲಿ ಮೂಡಿ ಬರುತ್ತಿರುವ ಈ ನೂತನ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯದಲ್ಲೇ ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ‌.

ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಬೃಂದಾ. ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಎಸ್ ನಾರಾಯಣ್ ಅವರು ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೆ‌ಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನವಿದೆ. ಪಿ.ಕೆ.ಎಚ್ ದಾಸ್ ಕ್ಯಾಮರಾ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

Tags:    

Similar News