ಬಹು ನಿರೀಕ್ಷಿತ 'ಪೌಡರ್' ಸಿನಿಮಾ ಜುಲೈ 14ರಂದು ತೆರೆಗೆ
ʼಪೌಡರ್ʼ ಸಿನಿಮಾ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಜುಲೈ 14 ರಂದು ಸಿನಿಮಾ ರಿಲೀಸ್ ಆಗಲಿದೆ.;
ಕೆ.ಆರ್.ಜಿ ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್‌ನ ಚೊಚ್ಚಲ ಸಹಯೋಗದ ಮೊದಲ ಚಿತ್ರವಾದ ʼಪೌಡರ್ʼ ಸಿನಿಮಾ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಜುಲೈ 14 ರಂದು ಸಿನಿಮಾ ರಿಲೀಸ್ ಆಗಲಿದೆ.
ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್ ವಿಭಿನ್ನ ಕಥಾವಸ್ತುವನ್ನು ಸಿನಿ ಪ್ರೇಕ್ಷಕರ ಮುಂದಿಡುವ ಗುರಿಯೊಂದಿಗೆ ಈಗಾಗಲೇ ಹಲವಾರು ಪ್ರಖ್ಯಾತ ಚಿತ್ರಗಳನ್ನು ನಿರ್ಮಿಸಿವೆ. ಇನ್ನು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಹಲವಾರು ವೆಬ್ ಸೀರೀಸ್ ಗಳ ಮೂಲಕ ತನ್ನದೇ ಛಾಪು ಮೂಡಿಸಿರುವ ಸಂಸ್ಥೆಯಾಗಿದ್ದು, ಎರಡು ಸಂಸ್ಥೆಗಳ ಸಹಯೋಗದಲ್ಲಿ ಮೂಡಿ ಬಂದಿರುವ ʼಪೌಡರ್ʼ ಸಿನಿಮಾ ಬಗ್ಗೆ ಬಹಳ ನಿರೀಕ್ಷೆಯಿದೆ.
ʼಪೌಡರ್ʼ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿ ಇಬ್ಬರು ಯುವಕರು ಒಂದು ನಿಗೂಢವಾದ ʼಪೌಡರ್ʼ ಪ್ರಭಾವದಿಂದಾಗಿ ದಿಢೀರನೇ ಶ್ರೀಮಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳನ್ನು ಬಿಚ್ಚಿಡಲಾಗಿದೆ. ಈಗಾಗಲೇ ತನ್ನ ಟೀಸರ್ ಮೂಲಕ ʼಪೌಡರ್ʼ ಎಲ್ಲೆಡೆ ನಗೆ ಚಟಾಕಿ ಹತ್ತಿಸಿದ್ದು, ಚಿತ್ರ ಬಿಡುಗಡೆಯ ನಂತರ ಈ ಹಾಸ್ಯ, ನಗು ದುಪ್ಪಟ್ಟುಗೊಳ್ಳಲಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಜನಾರ್ದನ್ ಚಿಕ್ಕಣ್ಣ ನಿರ್ದೇಶನದ 'ಪೌಡರ್' ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ರಂಗಾಯಣ ರಘು ನಟಿಸಿದ್ದಾರೆ. ಇದನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿದ್ದಾರೆ ಮತ್ತು ವಿಜಯ್ ಕಿರಗಂದೂರ್ ಪ್ರಸ್ತುತಪಡಿಸಿದ್ದಾರೆ. ಜೊತೆಗೆ ನಿರ್ಮಾಪಕ ಟಿವಿಎಫ್ ಕನ್ನಡ ಚಿತ್ರರಂಗದಲ್ಲಿ ಚೊಚ್ಚಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯುವಕರಿಗೆ, ಸಿನಿ ಪ್ರೇಕ್ಷಕರಿಗೆ ಹೊಸ ರೀತಿಯ ಕಥೆಗಳನ್ನು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳನ್ನು ನೀಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಪೌಡರ್ ನಮ್ಮ ಸಹಯೋಗದ ಚೊಚ್ಚಲ ಪ್ರಯತ್ನವಾಗಿದೆ. ಚಿತ್ರವನ್ನು ನೋಡಿ ಪ್ರೇಕ್ಷಕರು ತಮ್ಮ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ ಎಂಬ ಭರವಸೆ ನಮಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ವಿಭಿನ್ನ ಕಥೆಗಳನ್ನು ಈ ಸಹಯೋಗದ ಮೂಲಕ ಮುಂದಿಡಲು ಬಯಸುತ್ತೇವೆ ಎಂದು ಕಾರ್ತಿಕ್ ಗೌಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ದೀಪಕ್ ವೆಂಕಟೇಶನ್ ಕಥೆ ಬರೆದಿದ್ದು, ತ್ರಿಲೋಕ್ ತ್ರಿವಿಕ್ರಮ್ ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.