ಕುಂದಾಪುರಕ್ಕೆ ಬಂದ ‘ಕಲ್ಕಿ’ಯ ಬುಜ್ಜಿ ಕಾರು; ಡ್ರೈವ್ ಮಾಡಿದ ರಿಷಬ್ ಶೆಟ್ಟಿ
‘ಕಲ್ಕಿ’ಯ ಈ ಬುಜ್ಜಿ ವಾಹನ ಕುಂದಾಪುರಕ್ಕೆ ಬಂದಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಬುಜ್ಜಿಯನ್ನು ಓಡಿಸಿ ಖುಷಿ ಪಟ್ಟಿದ್ದಾರೆ.;
‘ಕಲ್ಕಿ 2898 ಎಡಿ’ ಸಿನಿಮಾ ದೇಶದಾದ್ಯಂತ ಜೂನ್ 27 ರಂದು ತೆರೆಕಾಣಲಿದ್ದು, ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ವಿಶೇಷವಾಗಿ ಈ ಸಿನಿಮಾದ ಪ್ರಚಾರದಲ್ಲಿ ಬುಜ್ಜಿಯನ್ನು ಪ್ರಧಾನವಾಗಿ ಬಳಸಲಾಗುತ್ತಿದೆ. ಇದೀಗ ‘ಕಲ್ಕಿ’ಯ ಈ ಬುಜ್ಜಿ ವಾಹನ ಕುಂದಾಪುರಕ್ಕೆ ಬಂದಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಬುಜ್ಜಿಯನ್ನು ಓಡಿಸಿ ಖುಷಿ ಪಟ್ಟಿದ್ದಾರೆ.
ಕುಂದಾಪುರಕ್ಕೆ ಬಂದ ಬುಜ್ಜಿಗೆ ಮದ್ದಳೆ ಮೇಳದಿಂದ ರಿಷಬ್ ಶೆಟ್ಟಿಯವರು ಸ್ವಾಗತ ಕೋರಿದರು. ರಿಷಬ್ ಶೆಟ್ಟಿ ಕೂಡ ಈ ಕಾರನ್ನು ಓಡಿಸಿ ಖುಷಿಪಟ್ಟಿದ್ದು, ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಬುಜ್ಜಿ ಕಾರಿನ ಮುಂದೆ ರಿಷಬ್ ಶೆಟ್ಟಿ ಮಗನೂ ನಿಂತು ಪೋಸ್ ನೀಡಿದ್ದಾನೆ.
ರಿಷಬ್ ಶೆಟ್ಟಿ ಈ ಕುರಿತಾದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಈ ಜೂನ್ 22ರಂದು ಕಲ್ಕಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬುಜ್ಜಿ ಕಾರನ್ನು ನೋಡಿ ಖುಷಿಯಾಯ್ತು. ಇದರ ಚಾಲನೆ ಒಳ್ಳೆಯ ಎಕ್ಸ್‌ಪಿರಿಯೆನ್ಸ್. ಎಲ್ಲರೂ ಈ ಸಿನಿಮಾ ನೋಡಿ. ಆಲ್ ದಿ ಬೆಸ್ಟ್ ಪ್ರಭಾಸ್ ಸರ್" ಎಂದು ರಿಷಬ್ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾದಲ್ಲಿ ಬುಜ್ಜಿ ಕಾರು ಪ್ರಮುಖ ಆಕರ್ಷಣೆಯಾಗಿದೆ. ಪ್ರಭಾಸ್ ಚಾಲನೆ ಮಾಡುವ ಈ ಕಾರು ಸಿನಿಮಾದಲ್ಲಿ ಸುಧಾರಿತ ತಂತ್ರಜ್ಞಾದ ಕಾರಾಗಿರಲಿದೆ.
ಈಗಾಗಲೇ ಸಿನಿಮಾದ ಟ್ರೇಲರ್‌ಗಳಲ್ಲಿ, ಹಾಡುಗಳಲ್ಲಿ ಬುಜ್ಜಿ ಕಾರು ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಈ ಕಾರನ್ನು ಈಗಾಗಲೇ ಭಾರತದ ಪ್ರಮುಖ ನಟರು ಡ್ರೈವ್ ಮಾಡಿದ್ದಾರೆ. ಆನಂದ್ ಮಹೀಂದ್ರ ಕೂಡ ಈ ಕಾರನ್ನು ಡ್ರೈವ್ ಮಾಡಿದ್ದಾರೆ.
ಸೈನ್ಸ್ ಫಿಕ್ಷನ್ ಚಿತ್ರ ʼಕಲ್ಕಿ 2898 ಎಡಿʼ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದು, ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ನೀವು ನಾಗ್ ಅಶ್ವಿನ್ ಕಟ್ಟಿಕೊಟ್ಟ ಬೇರೆಯದೇ ಪ್ರಪಂಚವನ್ನು ಕಣ್ತುಂಬಿಕೊಳ್ಳಬಹುದು. ಸುಮಾರು 6,000 ವರ್ಷಗಳ ಕಥೆ ತೆರೆ ಮೇಲೆ ಮೂಡಲಿದೆ.
ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ದಿಶಾ ಪಟಾನಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣದವಾದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರಲಿದೆ.