Wayanad landslides | ಶವ ಗುರುತಿಸಲು ಡಿಎನ್ಎ ಪರೀಕ್ಷೆ: ಸಂಬಂಧಿಕರು, ವೈದ್ಯರ ಮೇಲೆ ಹೊರೆ

ಭೂಕುಸಿತ ದುರಂತದ ತೀವ್ರತೆಯಿಂದಾಗಿ, ಶವವನ್ನು ನೋಡುವ ಮೂಲಕ ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆ ಅತ್ಯಗತ್ಯವಾಗಿದೆ. ಆದರೆ, ಈ ಪ್ರಕ್ರಿಯೆ ಸಂಬಂಧಿಕರು ಹಾಗೂ ವೈದ್ಯರ ಮೇಲೆ ಭಾವನಾತ್ಮಕ ಒತ್ತಡ ಹೇರುತ್ತಿದೆ.;

Update: 2024-08-03 09:44 GMT
ವಯನಾಡಿನಲ್ಲಿ ಭೂಕುಸಿತ ದುರಂತ ಸಂಭವಿಸಿ ನಾಲ್ಕು ದಿನ ಕಳೆದರೂ, ಇನ್ನೂ ಹಲವು ಮೃತದೇಹಗಳು ಪತ್ತೆಯಾಗಿಲ್ಲ.

ವಯನಾಡಿನ ಚೂರಲ್ಮಲ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರ, ಕೇರಳ ಸರ್ಕಾರವು ಛಿದ್ರಗೊಂಡ ದೇಹಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಯನ್ನು ಪ್ರಾರಂಭಿಸಿದೆ.

ತಮ್ಮ ಪ್ರೀತಿಪಾತ್ರರನ್ನು ಗುರುತಿಸಬೇಕಾದ ನೋವನ್ನು ಎದುರಿಸುತ್ತಿರುವ ಕುಟುಂಬಗಳು ತೀವ್ರ ದುಃಖದಲ್ಲಿವೆ; ದೇಹದ ಭಾಗಗಳು ತೀವ್ರವಾಗಿ ಹಾನಿಗೊಂಡಿವೆ ಮತ್ತು ವಿರೂಪಗೊಂಡಿವೆ. ಶವಗಳ ಪತ್ತೆ ಕೆಲಸವು ವೈದ್ಯರನ್ನು ಭಾವನಾತ್ಮಕವಾಗಿ ಬರಿದು ಮಾಡುವುದರಿಂದ, ಅವರು ಕೂಡ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

ಸಂಬಂಧಿಕರು ಮೃತರನ್ನು ಡಿಎನ್‌ಎ ಮೂಲಕ ಗುರುತಿಸುವ ಆಘಾತಕಾರಿ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ. ಏಕೆಂದರೆ, ಅನೇಕ ದೇಹಗಳು ಛಿದ್ರಗೊಂಡಿವೆ ಮತ್ತು ಅವನ್ನು ಗುರುತಿಸಲು ಆಗುತ್ತಿಲ್ಲ. ದುರಂತದ ತೀವ್ರತೆಯಿಂದಾಗಿ, ದೇಹಗಳನ್ನು ನೋಡುವ ಮೂಲಕ ಗುರುತಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೃತರ ಪತ್ತೆಗೆ ಡಿಎನ್‌ಎ ಪರೀಕ್ಷೆ ಅತ್ಯಗತ್ಯವಾಗಿದೆ. ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಕಲ್ಪೆಟ್ಟಾ ಬ್ಲಾಕ್ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದ ಪರಿಸ್ಥಿತಿ ಭೀಕರ ಮತ್ತು ಹೃದಯ ವಿದ್ರಾವಕವಾಗಿದೆ.

ದೇಹಗಳನ್ನು ಗುರುತಿಸಲು ಜನರು ಮುಖವಾಡಗಳನ್ನು ಧರಿಸಿ ಸರತಿ ಸಾಲಿನಲ್ಲಿ ನಿಂತಿರುವ ನೋವಿನ ದೃಶ್ಯಗಳಿಗೆ ದ ಫೆಡರಲ್ ಸಾಕ್ಷಿಯಾ ಯಿತು.

ಕರ್ತವ್ಯದಲ್ಲಿರುವ ವೈದ್ಯರು ಮೃತರ ಮುಖವನ್ನು ಮುಚ್ಚಿರುವ ಬಟ್ಟೆಗಳನ್ನು ಎತ್ತಿ, ಮೃತರನ್ನು ಗುರುತಿಸಲು ಕುಟುಂಬಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅನೇಕ ದೇಹಗಳು ಛಿದ್ರಗೊಂಡು, ಕೊಳೆತಿರುವುದರಿಂದ ಈ ಕೆಲಸ ಅತ್ಯಂತ ಕಷ್ಟಕರವಾಗಿದೆ.

ನಾಪತ್ತೆಯಾಗಿರುವ ಅಬ್ಬಾಸ್ ಅವರ ಸಂಬಂಧಿ ಖೈರುನೀಸಾ ಅವರ ದುಃಖಕ್ಕೆ ಸಾಂತ್ವನ ಹೇಳಲು ಸಾಧ್ಯವೇ ಇಲ್ಲ; ʻಇದು ಅಸಹನೀಯ ಸ್ಥಿತಿ. ನಾವು ಅವರ ಕುತ್ತಿಗೆ ಮೇಲಿರುವ ಮಚ್ಚೆಯಿಂದ ದೇಹವನ್ನು ಗುರುತಿಸಿದ್ದೇವೆ. ಆದರೆ, ಸರತಿಯಲ್ಲಿರುವ ಇತರರು ಇದು ತಮ್ಮ ಪ್ರೀತಿಪಾತ್ರರ ದೇಹ ಎಂದು ಹೇಳುತ್ತಿದ್ದಾರೆ. ಯಾರ ದೇಹ ಎಂಬುದನ್ನು ಖಚಿತವಾಗಿ ತಿಳಿಯಲು, ಡಿಎನ್‌ಎ ಪರೀಕ್ಷೆಯು ನಮ್ಮ ಏಕೈಕ ಭರವಸೆಯಾಗಿದೆ,ʼ ಎಂದು ಅವರು ದಿ ಫೆಡರಲ್‌ಗೆ ತಿಳಿಸಿದರು.

ರಮೇಶ್‌ ಅವರ ಸಹೋದರ ಕಾಣೆಯಾಗಿದ್ದು, ಅವರು ತಮ್ಮ ಸಂಕಟವನ್ನು ಹಂಚಿಕೊಂಡರು: ʻಆ ದೇಹಗಳನ್ನು ನೋಡಿದಾಗ ಆಗುವ ನೋವನ್ನು ವಿವರಿಸಲು ಸಾಧ್ಯವಿಲ್ಲ. ದೇಹದಲ್ಲಿ ಪರಿಚಿತವಾಗಿರುವ ಏನೋ ಇದೆ ಎಂದು ಗುರುತಿಸಲು ಪ್ರಯತ್ನ ನಡೆಸಬೇಕಾಗುತ್ತದೆ. ಅಂತಿಮವಾಗಿ, ಸ್ವಲ್ಪ ಸಮಾಧಾನ ನೀಡಲು ನಮಗೆ ಡಿಎನ್‌ಎ ಪರೀಕ್ಷೆಗಳು ಬೇಕಾಗುತ್ತವೆ,ʼ ಎಂದರು.

ಡಿಎನ್‌ಎ ಪರೀಕ್ಷೆ: ತಮ್ಮ ತಂಡದೊಂದಿಗೆ ವಯನಾಡ್‌ಗೆ ಬಂದಿರುವ ಕೊಚ್ಚಿಯ ಫೋರೆನ್ಸಿಕ್ ತಜ್ಞ ಡಾ. ಅನಿಲ್, ʻ ಡಿಎನ್‌ಎ ಪರೀಕ್ಷೆ ಪ್ರಕ್ರಿಯೆ ಮೂಲಕ ದೇಹಗಳನ್ನು ಗುರುತಿಸಲು ಸಾಮಾನ್ಯವಾಗಿ ಒಂದರಿಂದ ಮೂರು ವಾರ ತೆಗೆದುಕೊಳ್ಳುತ್ತದೆ. ದೇಹ ಮತ್ತು ಸಂಬಂಧಿಕರಿಂದ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಸಿದ್ಧಪಡಿಸುವುದು ಸಾಮಾನ್ಯವಾಗಿ ಕೆಲವು ಗಂಟೆಗಳಿಂದ ಒಂದು ದಿನ ತೆಗೆದುಕೊಳ್ಳುತ್ತದೆ. ಮಾದರಿಗಳ ಸ್ಥಿತಿ ಮತ್ತು ಪ್ರಯೋಗಾಲಯದ ದಕ್ಷತೆ ಆಧಾರದ ಮೇಲೆ ಡಿಎನ್‌ಎ ಹೊರತೆಗೆಯುವಿಕೆ ಮತ್ತು ಪ್ರೊಫೈ ಲಿಂಗ್ ಕಾರ್ಯವು ಹಲವು ದಿನಗಳಿಂದ ಒಂದು ವಾರ ತೆಗೆದುಕೊಳ್ಳಬಹುದು.ಡಿಎನ್‌ಎ ಪ್ರೊಫೈಲ್‌ಗಳನ್ನು ಹೋಲಿಸಿದ ಬಳಿಕ ಅಂತಿಮ ವರದಿ ಮತ್ತು ಸಂವಹನಕ್ಕೆ ಇನ್ನೂ ಕೆಲವು ದಿನ ಬೇಕಾಗುತ್ತದೆ. ನಾವು ತುರ್ತು ಪ್ರಕರಣಗಳಿಗೆ ಆದ್ಯತೆ ನೀಡುತ್ತೇವೆ. ಆದರೆ, ಕೆಲಸದ ಹೊರೆ ಮತ್ತು ಮಾದರಿಯ ಗುಣಮಟ್ಟವನ್ನು ಆಧರಿಸಿ, ಒಟ್ಟಾರೆ ಕಾಲಾವಧಿ ಬದಲಾಗಬಹುದು,ʼ ಎಂದು ದ ಫೆಡರಲ್‌ ಗೆ ತಿಳಿಸಿದರು.

ಒಂದು ದೇಹದ ಮೇಲೆ ತಮ್ಮ ಸಂಬಂಧಿಕರದ್ದು ಎಂದು ಅನೇಕರು ಹಕ್ಕು ಮಂಡಿಸುತ್ತಿರುವುದರಿಂದ, ವೈದ್ಯರು ಕೂಡ ಒತ್ತಡದಲ್ಲಿದ್ದಾರೆ.

ʻಮೃತರನ್ನು ನಿಖರವಾಗಿ ಗುರುತಿಸಲು ನಾವು ಸರಿಸುಮಾರು 20 ಛಿದ್ರಗೊಂಡ ದೇಹಗಳ ಡಿಎನ್‌ಎ ಪರೀಕ್ಷೆ ನಡೆಸುತ್ತಿದ್ದೇವೆ. ಸಮಸ್ಯೆ ಯೆಂದರೆ, ಕುಟುಂಬದ ಒಬ್ಬರು ಅಥವಾ ಇಬ್ಬರು ಸದಸ್ಯರು ಡಿಎನ್‌ಎ ಪರೀಕ್ಷೆ ಕೇಳುವುದಿಲ್ಲ; ಬದಲಿಗೆ, ಅನೇಕ ಸಂಬಂಧಿಕರು, ಕೆಲವೊಮ್ಮೆ ಐದಕ್ಕಿಂತ ಹೆಚ್ಚು ಮಂದಿ, ಪರೀಕ್ಷೆಯನ್ನು ಕೇಳುತ್ತಾರೆ. ಇದು ನಮಗೆ ಕಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ,ʼ ಎಂದು ಡಾ.ಅನಿಲ್ ತಿಳಿಸಿದರು.

ಗೊಂದಲ, ಸಂಕಷ್ಟದಿಂದ ಪ್ರಕ್ರಿಯೆಗೆ ಹಾನಿ: ಉದಾಹರಣೆಗೆ, ಚಾಮರಾಜನಗರ ತಾಲೂಕಿನ ನಿವಾಸಿ ರಾಜನ್ (50) ಅವರ ಮೃತದೇಹ ಪತ್ತೆಯಾಗಿದೆ ಎಂದು ವಯನಾಡ್ ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದೆ.

ದೇಹದ ಭಾಗಗಳ ಮೂಲಕ ಪ್ರಾಥಮಿಕ ಗುರುತು ಪತ್ತೆಯಾದರೂ, ಆನಂತರ ಸಂಬಂಧಿಕರು ಶವ ರಾಜನ್ ಅವರದ್ದಲ್ಲ ಎಂದು ಹೇಳಿದರು. ಇದು ಮತ್ತಷ್ಟು ಗೊಂದಲ ಮತ್ತು ಸಂಕಟಕ್ಕೆ ಕಾರಣವಾಯಿತು. ಇದರಿಂದ ಇತರ ಕುಟುಂಬಗಳು ಆ ದೇಹ ಕಾಣೆಯಾದ ತಮ್ಮ ಸಂಬಂಧಿಕ ರದ್ದು ಆಗಿರಬಹುದು ಎನ್ನುತ್ತಾರೆ. ಆಗ ಗುರುತನ್ನು ದೃಢೀಕರಿಸಲು ಡಿಎನ್‌ಎ ಪರೀಕ್ಷೆ ಅಗತ್ಯವಾಗುತ್ತದೆ.

ಮುಂಡಕೈಯಲ್ಲಿ ನೆಲೆಸಿದ್ದ ಟಿ. ನರಸೀಪುರದ ಮಹದೇವಮ್ಮ ಅವರ ಕುಟುಂಬದ ಒಂಬತ್ತು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಶ್ರೇಯಾ (19) ಮತ್ತು ಶಿವಣ್ಣ (50) ಅವರ ಮೃತದೇಹವನ್ನು ಗುರುತಿಸಿ, ಅಂತ್ಯಕ್ರಿಯೆ ನಡೆಸಲಾಗಿದೆ.

ಗುರುವಾರ ಬೆಳಗ್ಗೆ ಅಧಿಕಾರಿಗಳು ಸಾವಿತ್ರಿ (52) ಅವರ ಶವವನ್ನು ಪತ್ತೆ ಮಾಡಿದರು; ಆದರೆ, ಅದನ್ನು ಗುರುತಿಸಲು ಆಗಲಿಲ್ಲ. ಸಂಬಂಧಿಕರು ದೇಹದ ಇತರ ಭಾಗಗಳಿಂದ ಅವರನ್ನು ಗುರುತಿಸಬೇಕಾಗಿ ಬಂದಿತು. ಇಂಥ ಪರಿಸ್ಥಿತಿಯಲ್ಲಿ ಡಿಎನ್‌ಎ ಪರೀಕ್ಷೆ ಅಗತ್ಯವಿರುತ್ತದೆ. ಮಹದೇ ವಮ್ಮ ಅವರ ಮತ್ತೊಬ್ಬ ಪುತ್ರ ಸಿದ್ದರಾಜು (42) ಅವರ ದೇಹದ ಉಳಿದ ಭಾಗ ಛಿದ್ರಗೊಂಡಿದ್ದರೂ, ಶೂ ಇದ್ದ ಕಾಲಿನಿಂದ ಅವರನ್ನು ಗುರುತಿ ಸಲಾಯಿತು. ಆದರೆ, ಶವ ಆತನದ್ಧೇ ಎಂದು ಸಂಬಂಧಿಕರಿಗೆ ಸಂಪೂರ್ಣವಾಗಿ ಖಚಿತವಾಗಿಲ್ಲ. ಸಿದ್ದರಾಜು ಗುರುತು ದೃಢೀಕರಿಸಲು, ಡಿಎನ್‌ಎ ಪರೀಕ್ಷೆ ಅಗತ್ಯವಿದೆ. ಮಹದೇವಮ್ಮ ಅವರ ಮತ್ತೊಬ್ಬ ಪುತ್ರ ಗುರುಮಲ್ಲನದು ಎನ್ನಲಾದ ಶವವನ್ನು ಇತರ ನಾಲ್ಕು ಕುಟುಂಬ ಗಳು ತಮ್ಮ ಕುಟುಂಬದವರದ್ದುಎಂದು ಹೇಳಿಕೊಳ್ಳುತ್ತಿವೆ. ಗುರುಮಲ್ಲನ ಮುಖದ ಮೇಲಿನ ಗುರುತಿನಿಂದ ಸಂಬಂಧಿಕರು ಪತ್ತೆ ಹಚ್ಚಿದ್ದಾರೆ. ಆದರೆ, ಇತರ ಕುಟುಂಬಗಳು ಕೂಡ ಆತನ ಶವ ತಮ್ಮ ಪ್ರೀತಿಪಾತ್ರರದ್ದು ಎನ್ನುತ್ತಿದ್ದಾರೆ. ಇಂಥ ಸಮಸ್ಯೆಯನ್ನು ಪರಿಹರಿಸಲು ಡಿಎನ್‌ಎ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಗುರುಮಲ್ಲ ಅವರ ಸಂಬಂಧಿ ಲಕ್ಷ್ಮಿ ಹೇಳಿದ್ದಾರೆ.

Tags:    

Similar News