ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಪ್ರಕಾರ, 1995ರ ವಕ್ಫ್ ಕಾಯ್ದೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.
ಸಂಸತ್‌ನಲ್ಲಿ ತೀವ್ರ ಚರ್ಚೆಯ ಬಳಿಕ ಅಂಗೀಕರಾಗೊಂಡಿರುವ ವಕ್ಫ್ (ತಿದ್ದುಪಡಿ) ಕಾಯ್ದೆ ಇಂದಿನಿಂದಲೇ (ಏಪ್ರಿಲ್ 8ರಂದು) ಜಾರಿಗೆ ಬಂದಿದೆ. ಈ ಕಾಯ್ದೆಯು ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ. ಈ ವಿಧೇಯಕಕ್ಕೆ ಕಳೆದ ವಾರ ಸಂಸತ್‌ನ ಎರಡೂ ಸದನಗಳಲ್ಲಿ ಅಂಗೀಕಾರ ಸಿಕ್ಕಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ (ಏಪ್ರಿಲ್ 5) ಈ ಮಸೂದೆಗೆ ಒಪ್ಪಿಗೆ ನೀಡಿದ ನಂತರ, ಕೇಂದ್ರ ಸರ್ಕಾರವು ಮಂಗಳವಾರ (ಏಪ್ರಿಲ್ 8) ಅಧಿಸೂಚನೆ ಹೊರಡಿಸಿ ಕಾಯ್ದೆಯನ್ನು ಜಾರಿಗೊಳಿಸಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಪ್ರಕಾರ, 1995ರ ವಕ್ಫ್ ಕಾಯ್ದೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಈಗ "ಯೂನಿಫೈಡ್ ವಕ್ಫ್ ಮ್ಯಾನೇಜ್‌ಮೆಂಟ್ ಎಂಪವರ್‌ಮೆಂಟ್, ಎಫಿಷಿಯೆನ್ಸಿ ಆಂಡ್ ಡೆವಲಪ್‌ಮೆಂಟ್ (ಉಮೀದ್)" ಕಾಯ್ದೆ ಎಂದು ಕರೆಯಲಾಗುತ್ತಿದೆ.
ರಾಜಕೀಯ ವಿರೋಧ ಮತ್ತು ಕಾನೂನು ಸವಾಲು
ಈ ಕಾಯ್ದೆಯು ಸಂಸತ್‌ನಲ್ಲಿ ಅಂಗೀಕಾರಗೊಂಡರೂ, ಕಾಂಗ್ರೆಸ್, ಎಐಎಂಐಎಂ ಮತ್ತು ಇತರ ವಿರೋಧ ಪಕ್ಷಗಳು ಇದನ್ನು 'ಸಂವಿಧಾನ ವಿರೋಧಿ' ಮತ್ತು "ಪ್ರಜಾಪ್ರಭುತ್ವ ವಿರೋಧಿ" ಎಂದು ಟೀಕಿಸಿವೆ. ಈ ಕಾಯ್ದೆಯು ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ವೈಯಕ್ತಿಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪವೆಂದು ಆರೋಪಿಸಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‌ಬಿ), ಜಮಿಯತ್ ಉಲಮಾ-ಎ-ಹಿಂದ್ ಮತ್ತು ಎಐಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಸೇರಿದಂತೆ ಹಲವರು ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಪ್ರತಿಕ್ರಿಯೆ
ಕಾಯ್ದೆಯ ಅಂಗೀಕಾರದ ನಂತರ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್ ಮತ್ತು ಮುಜಫ್ಫರ್‌ನಗರದಲ್ಲಿ ಸಾವಿರಾರು ಜನರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಮುಜಫ್ಫರ್‌ನಗರದಲ್ಲಿ 300 ಪ್ರತಿಭಟನಾಕಾರರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿ, ತಲಾ 2 ಲಕ್ಷ ರೂಪಾಯಿಗಳ ಬಾಂಡ್ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈಗ ಕಾಯ್ದೆ ಜಾರಿಗೆ ಬಂದಿದ್ದರೂ ಸಂಪೂರ್ಣ ಅನುಷ್ಠಾನಕ್ಕೆ ವಿವರವಾದ ನಿಯಮಗಳನ್ನು ಸರ್ಕಾರವು ರೂಪಿಸಬೇಕಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಸವಾಲುಗಳು ಈ ಕಾಯ್ದೆಯ ಭವಿಷ್ಯವನ್ನು ಗಮನಾರ್ಹವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ