ಜನವರಿ 11-12ರಂದು ದೆಹಲಿಯಲ್ಲಿ 'ವಿಕಸಿತ್ ಭಾರತ್ ಯುವ ನಾಯಕರ ಸಂವಾದ': ಪ್ರಧಾನಿ ಮೋದಿ
ತಮ್ಮ ಮಾಸಿಕ 'ಮನ್ ಕಿ ಬಾತ್' ರೇಡಿಯೋ ಪ್ರಸಾರದ 116 ನೇ ಸಂಚಿಕೆಯಲ್ಲಿ, ಜನವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು ಎಂದು ಮೋದಿ ಹೇಳಿದರು.;
ಜನವರಿ 11-12 ರಂದು ದೆಹಲಿಯಲ್ಲಿ "ವಿಕಸಿತ್ ಭಾರತ್ ಯುವ ನಾಯಕರ ಸಂವಾದ" ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ನವೆಂಬರ್ 24) ಘೋಷಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ರಾಜಕೀಯ ಹಿನ್ನೆಲೆಯಿಲ್ಲದ ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಸಂಪರ್ಕಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಮಾಸಿಕ 'ಮನ್ ಕಿ ಬಾತ್' ರೇಡಿಯೋ ಪ್ರಸಾರದ 116 ನೇ ಸಂಚಿಕೆಯಲ್ಲಿ, ಜನವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು ಎಂದು ಮೋದಿ ಹೇಳಿದರು.
"ಕೆಂಪು ಕೋಟೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬಕ್ಕೆ ಸೇರಿದ ಯುವಕರಿಗೆ ಅವಕಾಶವಾಗಿದೆ. ಒಂದು ಲಕ್ಷ ಯುವಕರನ್ನು ರಾಜಕೀಯದೊಂದಿಗೆ ಸಂಪರ್ಕಿಸಲು, ದೇಶದಲ್ಲಿ ಅನೇಕ ವಿಶೇಷ ಅಭಿಯಾನಗಳನ್ನು ನಡೆಸಲಾಗುವುದು. ವಿಕಸಿತ್ ಭಾರತ್ ಯುವ ನಾಯಕರ ಸಂವಾದವು ಅಂತಹ ಒಂದು ಉಪಕ್ರಮ" ಎಂದು ಮೋದಿ ಹೇಳಿದರು.
ಎನ್‌ಸಿಸಿ ಬಗ್ಗೆ ಪ್ರಧಾನಿ ಶ್ಲಾಘನೆ
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಅನ್ನು ಶ್ಲಾಘಿಸಿದ ಪ್ರಧಾನಿ, ತಮ್ಮ ಶಾಲಾ ಮತ್ತು ಕಾಲೇಜು ದಿನಗಳನ್ನು ನೆನಪಿಸುತ್ತದೆ ಎಂದು ಹೇಳಿದರು.
"ನಾನು ಸ್ವತಃ ಎನ್‌ಸಿಸಿ ಕೆಡೆಟ್ ಆಗಿದ್ದೆ. ಆದ್ದರಿಂದ ಅದರಿಂದ ನಾನು ಪಡೆದ ಅನುಭವವು ನನಗೆ ಅಮೂಲ್ಯ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಎನ್‌ಸಿಸಿ ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ಸೇವಾ ಮನೋಭಾವ ಬೆಳೆಸುತ್ತದೆ" ಎಂದು ಅವರು ಹೇಳಿದರು.
ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಜಾಗತಿಕವಾಗಿ ತಮ್ಮ ಛಾಪು ಮೂಡಿಸಿದ, ಸ್ವಾತಂತ್ರ್ಯ ಹೋರಾಟಗಗಳಿಗೆ ಕೊಡುಗೆ ನೀಡಿದ ಮತ್ತು ಭಾರತೀಯ ಪರಂಪರೆ ಸಂರಕ್ಷಿಸಿದ ಭಾರತೀಯ ವಲಸೆಗಾರರ ಸ್ಪೂರ್ತಿದಾಯಕ ಕಥೆಗಳನ್ನು ಸಂಭ್ರಮಿಸುವಂತೆ ಮೋದಿ ಜನರಿಗೆ ಕರೆ ಕೊಟ್ಟರು .
ನಮೊ ಆಪ್ ಅಥವಾ ಮೈಗೌವ್ ಆಪ್ ಮೂಲಕ 'Indian Diaspora Stories ಹ್ಯಾಶ್ ಟ್ಯಾಗ್ ಮೂಲಕ ಸಾಧಕರನ್ನು ಸ್ಮರಿಸಲು ಅವರು ಕರೆ ಕೊಟ್ಟರು.