US Vice President | ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಗಮನ; ಅಕ್ಷರಧಾಮಕ್ಕೆ ಭೇಟಿ
4 ದಿನಗಳ ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಜೆ.ಡಿ. ವ್ಯಾನ್ಸ್ ಅವರು ಕುಟುಂಬ ಸಮೇತ ಅಕ್ಷರಧಾಮ ದೇವಾಲಯ, ಜೈಪುರ ಹಾಗೂ ಉತ್ತರ ಪ್ರದೇಶದ ಆಗ್ರಾಗೆ ಭೇಟಿ ನೀಡಲಿದ್ದಾರೆ.;
ನವದೆಹಲಿಗೆ ಸೋಮವಾರ ಅಮೇರಿಕಾದ ಉಪಾಧ್ಯಕ್ಷ ಜೆ, ಡಿ, ವ್ಯಾನ್ಸ್ ಕುಟುಂಬವನ್ನುರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬರಮಾಡಿಕೊಂಡರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ 60 ರಾಷ್ಟ್ರ ಗಳ ಮೇಲೆ ಸುಂಕ ಹೇರಿಕೆಗೆ 90 ದಿನಗಳ ವಿರಾಮ ನೀಡಿದ ಒಂದು ವಾರದ ನಂತರ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.
ನಾಲ್ಕು ದಿನಗಳ ಪ್ರವಾಸಕ್ಕಾಗಿ ಸೋಮವಾರ ನವದೆಹಲಿಗೆ ಬಂದಿಳಿದ ಜೆ.ಡಿ. ವ್ಯಾನ್ಸ್, ಭಾರತ ಮೂಲದ ಪತ್ನಿ ಉಷಾ ಹಾಗೂ ಮೂವರು ಮಕ್ಕಳಾದ ಎವೆನ್, ವಿವೇಕ್, ಮಿರಾಬೆಲ್ ಅವರನ್ನು ಪಾಲಮ್ ವಾಯುನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬರಮಾಡಿಕೊಂಡರು.
ಜೆ.ಡಿ.ವ್ಯಾನ್ಸ್ ಆಗಮನ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ದೆಹಲಿಗೆ ಬಂದಿರುವ ಜೆ.ಡಿ.ವ್ಯಾನ್ಸ್ ಅವರು ಕುಟುಂಬದೊಂದಿಗೆ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ಭಾರತೀಯ ಸಂಪ್ರದಾಯಿಕ ಕರಕುಶಲ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಜೈಪುರ ಹಾಗೂ ಆಗ್ರಾದ ತಾಜ್‌ಮಹಲ್‌ಗೂ ವ್ಯಾನ್ಸ್ ಕುಟುಂಬ ಭೇಟಿ ನೀಡಲಿದೆ.
ಬಿಗಿ ಭದ್ರತೆ, ಸಂಚಾರ ಮಾರ್ಗ ಬದಲು
ಅಕ್ಷರಧಾಮ ದೇವಾಲಯಕ್ಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಭೇಟಿ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವ್ಯಾನ್ಸ್ ಭೇಟಿ ಸಂದರ್ಭದಲ್ಲಿ ಅಧಿಕಾರಿಗಳ ತಂಡ ಜೊತೆಯಲ್ಲೇ ಇರಲಿದೆ. ವ್ಯಾನ್ಸ್ ಭೇಟಿಯ ಕಾರಣ ಇಲ್ಲಿನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಸೋಮವಾರ ಬೆಳಿಗ್ಗೆ 6 ರಿಂದ ಸಂಜೆ 9 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಉಭಯ ನಾಯಕರು ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಅಮೆರಿಕಾದ ದೀರ್ಘಕಾಲದ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಾಗೆ ಭೇಟಿ ನೀಡಿದ್ದ ವೇಳೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಈ ಕುರಿತು ಚರ್ಚಿಸಿದ್ದರು. ಅದರ ಭಾಗವಾಗಿ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ.
ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕದ ಭದ್ರತಾ ಸಂಸ್ಥೆ ಪಂಟಗಾನ್‌ನ ಐವರು ಅಧಿಕಾರಿಗಳ ತಂಡ ಹಾಗೂ ರಾಜತಾಂತ್ರಿಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯ ಬಳಿಕ ಪ್ರಧಾನಿ ಮೋದಿ ಅವರು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಸೋಮವಾರ ರಾತ್ರಿ ಜೈಪುರದಲ್ಲಿ ವಾಸ್ತವ್ಯ ಹೂಡಲಿರುವ ಜೆ.ಡಿ.ವ್ಯಾನ್ಸ್ ಅವರು ಬಳಿಕ ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.